ನವದೆಹಲಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕರ ಬೆಳವಣಿಗೆ ನಡೆದಿದೆ. ಹಾಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ. ಅಲ್ಲದೇ, ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ'ವನ್ನೂ ಅಜಿತ್ ಬಣಕ್ಕೆ ಹಂಚಿಕೆ ಮಾಡಿದೆ. ಇದರಿಂದ ಪಕ್ಷದ ಸಂಸ್ಥಾಪಕರಾಗಿದ್ದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಶರದ್ ಬಣ ಆಕ್ರೋಶ ವ್ಯಕ್ತಪಡಿಸಿದೆ.
ಉಭಯ ಬಣಗಳು ಪಕ್ಷದ ಸಂವಿಧಾನ ಮತ್ತು ಸಾಂಸ್ಥಿಕ ಚುನಾವಣೆಗಳ ಹೊರತಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಬಹುಮತ ಪರೀಕ್ಷೆಯ ಸಂದರ್ಭದಲ್ಲಿ ಸದನದಲ್ಲಿ ಬಣದ ಬಹುಮತವನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ, ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಮಧ್ಯಾಹ್ನದ ವೇಳೆಗೆ ತನ್ನ ರಾಜಕೀಯ ಸಂಘಟನೆಗೆ ಹೆಸರು ಸೂಚಿಸುವ ಮೂರು ಪ್ರಸ್ತಾವಗಳನ್ನು ಸಲ್ಲಿಸಲು ಶರದ್ ಪವಾರ್ ನೇತೃತ್ವದ ಬಣಕ್ಕೆ ಆಯೋಗ ಅವಕಾಶ ನೀಡಿದೆ.
ಪ್ರಸ್ತುತ ಮಹಾರಾಷ್ಟ್ರದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಎನ್ಸಿಪಿಯನ್ನೊಳಗೊಂಡ ಸಮ್ಮಿಶ್ರ ಸರ್ಕಾರದಲ್ಲಿ ಹಾಲಿ ಡಿಸಿಎಂ ಆಗಿರುವ ಅಜಿತ್ ಪವಾರ್ ಬಣದ ನಾಯಕರು ಆಯೋಗದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ಶರದ್ ಪವಾರ್ ಬಣದ ನಾಯಕ ಅನಿಲ್ ದೇಶಮುಖ್, ''ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ದುರದೃಷ್ಟಕರ'' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಉದ್ಧವ್ ನಂತರ ಪವಾರ್‌ಗೆ ಶಾಕ್:2019ರ ನವೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಯನ್ನು ಮಹಾರಾಷ್ಟ್ರ ಕಂಡಿದೆ. ಇದರಲ್ಲಿ ರಾಜ್ಯದ ಎರಡು ಪ್ರಬಲ ಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿ ಎರಡು ಭಾಗಗಳಾಗಿ ಒಡೆದುಹೋಗಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಗೆ ಬಹುಮತವೂ ಸಿಕ್ಕಿತ್ತು.