ತಿರುಚಿ(ತಮಿಳುನಾಡು): ಇಂದು ಸಂಜೆ 5:40ಕ್ಕೆ ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ ಉಂಟಾಗಿ, ಸುಮಾರು 2 ಗಂಟೆ ಆಕಾಶದಲ್ಲೇ ಹಾರಾಟ ನಡೆಸಿತು. ಅಂತಿಮವಾಗಿ, ಪೈಲಟ್‌ಗಳು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವಿಮಾನದಲ್ಲಿ 141 ಪ್ರಯಾಣಿಕರಿದ್ದರು.
ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆ ಕಂಡುಬಂದಾಗ ಪೈಲಟ್‌ಗಳು ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸಿ ವಿಮಾನವನ್ನು ಸುರಕ್ಷಿತವಾಗಿ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, "ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂಬ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟೆ. ವಿಮಾನದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯವಾಗಿರುವ ಬಗ್ಗೆ ವಿಷಯ ತಿಳಿದ ತಕ್ಷಣ ನಾನು ದೂರವಾಣಿ ಕರೆ ಮೂಲಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಸೂಚಿಸಿದೆ. ಎಲ್ಲ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಹೆಚ್ಚಿನ ಸಹಾಯ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.