ನವದೆಹಲಿ:ವಿವಾದಗಳಿಂದ ಹೆಚ್ಚು ಚಾಲ್ತಿಯಲ್ಲಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂದು ಹೊಸ ವಿವಾದ ಸೃಷ್ಟಿಸಿದರು. ನೂತನ ಸಂಸದನಾಗಿ ಪ್ರಮಾಣವಚನ ಕೈಗೊಳ್ಳುವಾಗ ಓವೈಸಿ, 'ಜೈ ಪ್ಯಾಲೆಸ್ಟೈನ್' ಎಂದು ಘೋಷಣೆ ಕೂಗಿದರು. ಇದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.
ತೆಲಂಗಾಣದ ಹೈದರಾಬಾದ್ ಲೋಕಸಭೆ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಅಸಾದುದ್ದೀನ್ ಓವೈಸಿ ಮಂಗಳವಾರ ಉರ್ದುವಿನಲ್ಲಿ ಪ್ರಮಾಣ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹು ಅಕ್ಬರ್ ಹೆಸರಿನಲ್ಲಿ ಪ್ರಮಾಣ ಮಾಡಿದ ಅವರು, ಕೊನೆಗೆ ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್ ಎಂದರು. ಇದರ ಜೊತೆಗೆ ಅವರ ಪಕ್ಷವಾದ ಎಂಐಎಎಂ (ಮಿಮ್) ಬಗ್ಗೆಯೂ ಪ್ರಸ್ತಾಪಿಸಿದರು.
ಪ್ಯಾಲೆಸ್ಟೈನ್ ಘೋಷಣೆಗೆ ಆಕ್ಷೇಪ:ಪಶ್ಚಿಮ ಏಷ್ಯಾದ ರಾಷ್ಟ್ರಗಳಾದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಯುದ್ಧ ನಡೆಯುತ್ತಿದೆ. ಸಾವಿರಾರು ಜನರ ಪ್ರಾಣಾಹುತಿಗೂ ಕಾರಣವಾಗಿದೆ. ಇದನ್ನೇ ಸಂಸದ ಓವೈಸಿ ಭಾರತದ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿದ್ದು, ಆಕ್ಷೇಪಕ್ಕೆ ಕಾರಣವಾಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದವಾಯಿತು. ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ರಾಧಾ ಮೋಹನ್ ಸಿಂಗ್ ಅವರು ಪ್ರಮಾಣ ವಚನದ ಹೊರತಾಗಿ ಯಾವುದೇ ಘೋಷಣೆಗಳನ್ನು ಕೂಗದಂತೆ ಸೂಚಿಸಿದರು.