ಹೈದರಾಬಾದ್/ಪಾಟ್ನಾ:ಜಾರ್ಖಂಡ್ ಶಾಸಕರು ಹೈದರಾಬಾದ್‌ಗೆ ಬಂದು ವಾಪಸ್ ಹೋದ ಬಳಿಕ ಇದೀಗ ಬಿಹಾರದ ಕಾಂಗ್ರೆಸ್ ಶಾಸಕರು ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಬಿಜೆಪಿಯ ಆಮಿಷಗಳಿಂದ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಈ ಬಿಹಾರ ಶಾಸಕರು ಹೈದರಾಬಾದ್‌ಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 19 ಪಕ್ಷದ ಶಾಸಕರ ಪೈಕಿ ಕನಿಷ್ಠ 16 ಶಾಸಕರು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪಾಟ್ನಾದಿಂದ ಆಗಮಿಸಿದ ಇವರನ್ನೆಲ್ಲ ಹೈದರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ರೆಸಾರ್ಟ್‌ಯೊಂದಕ್ಕೆ ಕರೆದೊಯ್ಯಲಾಗಿದೆ. ಫೆಬ್ರವರಿ 11 ರವರೆಗೆ ಇವರೆಲ್ಲ ಅಲ್ಲಿಯೇ ಉಳಿಯುವ ಸಾಧ್ಯತೆಯಿದೆ. ಸಿದ್ಧಾರ್ಥ, ಅಬಿದುರ್ ರೆಹಮಾನ್ ಮತ್ತು ವಿಜಯ್ ಶಂಕರ್ ದುಬೆ ಎಂಬ ಮೂವರು ಶಾಸಕರು ಆರೋಗ್ಯದ ಕಾರಣದಿಂದ ಹೈದರಾಬಾದ್‌ಗೆ ಆಗಮಿಸಿಲ್ಲ ಎಂದು ಹೇಳಲಾಗಿದೆ.
ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಬಿಹಾರದ ಈ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ. ಫೆಬ್ರವರಿ 12 ರಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಸ್ಥಳಾಂತರ ಮಾಡಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಸರ್ಕಾರಕ್ಕೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಆದೇಶಿಸಿರುವ ಹಿನ್ನೆಲೆಯಲ್ಲಿ 12 ರಂದು ಪ್ಲೋರ್ ಟೆಸ್ಟ್ ನಡೆಯಲಿದೆ. ಸಿಎಂ ನಿತೀಶ್ ಕುಮಾರ್ 'ಮಹಾಘಟಬಂಧನ್' ಜತೆ ಸಂಬಂಧ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷ ಕಾಂಗ್ರೆಸ್ ಆಗಿದೆ.