ನವದೆಹಲಿ:ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಎನ್ಸಿಪಿ ನಾಯಕ ಅಜಿತ್ ಪವಾರ್, ಫಡ್ನವೀಸ್ಗೆ ಬೆಂಬಲ ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಮಾಜಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದೆ. ಹೀಗಾಗಿ ಹೊಸ ಸಿಎಂ ಆಯ್ಕೆ ವಿಳಂಬವಾಗುತ್ತಿದೆ. ಹಾಗೊಂದು ವೇಳೆ ಬಿಕ್ಕಟ್ಟು ಉಂಟಾದಲ್ಲಿ ಅಜಿತ್ ಪವಾರ್ರ ಎನ್ಸಿಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಕಾರಣ, ಬಿಜೆಪಿ 132, ಅಜಿತ್ ಪವಾರ್ ಎನ್ಸಿಪಿಯು 41 ಸ್ಥಾನ ಹೊಂದಿದೆ. ಸರ್ಕಾರ ರಚನೆಗೆ ಬೇಕಾದ 145 ದಾಟಲು ಸಾಕಾಗುತ್ತದೆ.
ಅಮಿತ್ ಶಾ ಭೇಟಿಯಾದ ಫಡ್ನವೀಸ್:ಮಹಾಯುತಿ ಕೂಟದ ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಹಂಚಿಕೆಯಾಗಲಿದೆಯೇ ಎಂಬ ಚರ್ಚೆಯ ನಡುವೆ ಸಿಎಂ ರೇಸ್ನಲ್ಲಿರುವ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಸರ್ಕಾರ ರಚನೆ ಆಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸಿದ್ದಾರೆ.