ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಆರೋಪ ಹೊರಿಸಿದ್ದಾರೆ. ಜೈಲಿನಲ್ಲಿರುವ ಪತಿಯನ್ನು ಭೇಟಿ ಮಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಕೇಜ್ರಿವಾಲ್ ಭೇಟಿಗೆ ಇಂದು (ಸೋಮವಾರ) ಅವಕಾಶ ಕೋರಲಾಗಿತ್ತು. ಆದರೆ, ತಿಹಾರ್ ಜೈಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಪಕ್ಷದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, "ಮೋದಿ ಸರ್ಕಾರದ ಆದೇಶದ ಮೇರೆಗೆ ತಿಹಾರ್ ಜೈಲು ಆಡಳಿತವು ಸುನೀತಾ ಕೇಜ್ರಿವಾಲ್ ಅವರಿಗೆ ಪತಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಅಮಾನವೀಯತೆಯ ಎಲ್ಲ ಮೇರೆಗಳನ್ನು ಮೀರುತ್ತಿದೆ" ಎಂದು ಆರೋಪಿಸಿದೆ.
ಇಂದು (ಸೋಮವಾರ) ಸುನೀತಾ ಅವರು ಕೇಜ್ರಿವಾಲ್ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ತಿಹಾರ್ರ್ ಜೈಲಿನ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನೂ ಉಲ್ಲೇಖಿಸಿಲ್ಲ. ಚುನಾಯಿತ ಮುಖ್ಯಮಂತ್ರಿಯನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ. ಯಾಕೆ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ತಿಳಿಸಬೇಕು? ಎಂದು ಆಗ್ರಹಿಸಿದೆ.
ಜೈಲಿನ ನಿಯಮಗಳ ಪ್ರಕಾರ, ಒಬ್ಬ ಕೈದಿ ವಾರಕ್ಕೆ ಎರಡು ಬಾರಿ ತಮ್ಮವರನ್ನು ಭೇಟಿ ಮಾಡಬಹುದು. ಅವರಲ್ಲಿ ಇಬ್ಬರನ್ನು ಒಂದೇ ಬಾರಿಗೆ ಸಂಧಿಸಬಹುದು. ಆದರೆ, ಈ ನಿಯಮವನ್ನು ಕೇಜ್ರಿವಾಲ್ ವಿಚಾರದಲ್ಲಿ ಪಾಲನೆ ಮಾಡಲಾಗುತ್ತಿಲ್ಲ ಎಂದು ಆಪ್ ಆರೋಪಿಸಿದೆ.