ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿನ್ನೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಈ ಕ್ರಮ ಖಂಡಿಸಿ ಇಂದು ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ.
''ಬಿಜೆಪಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಕಳುಹಿಸಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದೆ. ಇದು ಪ್ರಜಾಪ್ರಭುತ್ವದ ಕೊಲೆ. ಬೆಳಿಗ್ಗೆ 10ಕ್ಕೆ ದೆಹಲಿಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ'' ಎಂದು ದೆಹಲಿ ಸಚಿವ ಗೋಪಾಲ್ ರೈ ಹೇಳಿದರು.
ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತವೆಯೇ ಎಂಬ ಪ್ರಶ್ನೆಗೆ, "ಶುಕ್ರವಾರ ಬಹಿರಂಗ ಪ್ರತಿಭಟನೆ ನಡೆಯಲಿದೆ. ಸರ್ವಾಧಿಕಾರದ ವಿರುದ್ಧ ಯಾರೇ ಇದ್ದರೂ ಎಲ್ಲರೂ ಸೇರಬಹುದು, ಅವರೆಲ್ಲರಿಗೂ ಸ್ವಾಗತ" ಎಂದರು.
ಎಎಪಿ ನಾಯಕ ಅತಿಶಿ ಪ್ರತಿಕ್ರಿಯಿಸಿ, "ಇಂಡಿಯಾ ಒಕ್ಕೂಟ, ಕಾಂಗ್ರೆಸ್ ಸದಸ್ಯರು ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ" ಎಂದು ಹೇಳಿದರು.