ತೇಜ್‌ಪುರ(ಅಸ್ಸಾಂ): ದೇಶದ ಅನೇಕ ಭಾಗಗಳಲ್ಲಿ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ಮಕ್ಕಳು-ಮೊಮ್ಮಕ್ಕಳು ಹೀಗೆ ಎಲ್ಲರೂ ಒಂದೇ ಮನೆಯಲ್ಲೇ ಒಟ್ಟಿಗೆ ವಾಸಿಸುತ್ತಿದ್ದರು. ಇಂದಿನ ದಿನಗಳಲ್ಲಿ ಇಂತಹ ಕುಟುಂಬಗಳು ಹಳ್ಳಿಗಳಲ್ಲೂ ಕಾಣಸಿಗುವುದು ಕಷ್ಟಸಾಧ್ಯ. ಅಪರೂಪಕ್ಕೆ ಕೆಲವರು ಅವಿಭಕ್ತ ಕುಟುಂಬಗಳಾಗಿ ವಾಸಿಸುತ್ತಿದ್ದಾರೆ. ಆದರೆ, ಪ್ರಸ್ತುತ ದಿನಮಾನಗಳಲ್ಲೂ ಒಂದು ಕುಟುಂಬ ಇಡೀ ಗ್ರಾಮವಾಗಿದೆ ಎಂದರೆ, ನೀವು ನಂಬಲೇಬೇಕು!.
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಅಂತಹ ಒಂದು ಗ್ರಾಮವಿದೆ. ಇಡೀ ಗ್ರಾಮವು ಒಂದೇ ಕುಟುಂಬದ ಸದಸ್ಯರನ್ನು ಹೊಂದಿದೆ. ಅಂದಾಜು 2,500 ಕುಟುಂಬ ಸದಸ್ಯರಿಂದ ಸಂಪೂರ್ಣ ಗ್ರಾಮ ಹರಡಿಕೊಂಡಿದೆ. ಆ ಗ್ರಾಮದ ಹೆಸರು ಫುಲ್ಗುರಿ ನೇಪಾಳಿ ಪಾಮ್. ರಂಗಪಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಗ್ರಾಮವಿದ್ದು, ಇದೇ 2024ರ ಲೋಕಸಭೆ ಚುನಾವಣೆಯಲ್ಲಿ ಈ ಕುಟುಂಬದ ಅರ್ಧದಷ್ಟು ಎಂದರೆ, 1,200 ಜನರು ಮತದಾನ ಮಾಡಲು ಸಿದ್ಧರಾಗಿದ್ದಾರೆ.
300 ಕುಟುಂಬಗಳಿಗೆ ಒಂದೇ ಬಳ್ಳಿ!: ಈ ಫುಲ್ಗುರಿ ನೇಪಾಳಿ ಪಾಮ್ ಗ್ರಾಮದಲ್ಲಿ ಒಟ್ಟು 300 ಕುಟುಂಬಗಳು ವಾಸವಾಗಿವೆ. ಈ ಎಲ್ಲ ಕುಟುಂಬಗಳ ಬಳ್ಳಿ ಒಂದೇ. ಸುಮಾರು 2,500 ಜನರು ಈ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮೂಲ ಬಳ್ಳಿ ರಾನ್ ಬಹದ್ದೂರ್ ಥಾಪಾ. ಇವರು ಫುಲ್ಗುರಿಯಲ್ಲಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ. ಇದೇ ಸ್ಥಳವನ್ನು ಫುಲ್ಗುರಿ ನೇಪಾಳಿ ಪಾಮ್ ಎಂದು ಕರೆಯಲಾಗುತ್ತದೆ. ಬಹದ್ದೂರ್ ಅವರಿಗೆ ಒಟ್ಟು ಐವರು ಹೆಂಡತಿಯರು. ಇವರ ಹೆಸರು ಹರಿ ಮಾಯಾ ಥಾಪಾ, ಪೋಬಿ ಮಾಯಾ ಥಾಪಾ, ಹೋರೋಖಾ ಮಾಯಾ ಥಾಪಾ, ಕಾಳಿ ಮಾಯಾ ಥಾಪಾ ಮತ್ತು ಖಾಜಿ ಮಾಯಾ ಥಾಪಾ. ಈ ಹೆಂಡತಿಯರಿಗೆ ಒಟ್ಟಾರೆ 12 ಗಂಡು ಮತ್ತು 10 ಹೆಣ್ಣು ಮಕ್ಕಳು. ಇಂತಹ ದೊಡ್ಡ ಕುಟುಂಬ ಇಡೀ ಹಳ್ಳಿಯಾಗಿ ಹಬ್ಬಿಕೊಳ್ಳುವುದರೊಂದಿಗೆ ಮೊಮ್ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ.