ಮೇದಕ್(ತೆಲಂಗಾಣ): ತಮ್ಮನ ಪ್ರೇಮ ವಿವಾಹವಕ್ಕೆ ಅಣ್ಣ ಬರ್ಬರವಾಗಿ ಕೊಲೆಯಾದ ಘಟನೆ ಮೇದಕ್ನಲ್ಲಿ ನಡೆದಿದೆ. ನಾಗೇಶ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮೇದಕ್ ಜಿಲ್ಲೆಯ ನವಾಬ ಪೇಟೆಯ ಯುವಕ ಪೋತರಾಜು ಉದಯ್ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಮದುವೆಗೆ ಎರಡೂ ಮನೆಯವರು ಒಪ್ಪದ ಕಾರಣ ಮನೆ ಬಿಟ್ಟು ಓಡಿ ಹೋಗಿ ಕೆಲ ದಿನಗಳ ಹಿಂದೆ ಹೈದರಾಬಾದ್ನಲ್ಲಿ ಮದುವೆಯಾಗಿದ್ದರು. ಇದರಿಂದ ಕುಪಿತಗೊಂಡ ಯುವತಿಯ ಸಹೋದರ ನವದಂಪತಿಗಾಗಿ ಎಷ್ಟೇ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಆತ ಭಾನುವಾರ ಉದಯ್ ಮನೆಗೆ ತೆರಳಿದ್ದ, ಆ ವೇಳೆ ಮನೆಯಲ್ಲಿದ್ದ ಉದಯ್ ಸಹೋದರ ನಾಗೇಶ್ ಬಳಿ ಅವರು ಎಲ್ಲಿದ್ದಾರೆ ತಿಳಿಸುವಂತೆ ಒತ್ತಾಯಿಸಿದ್ದ. ನಾಗೇಶ್, ಅವರು ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರ, ನಾಗೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್ ನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ನಾಗೇಶ್ನನ್ನು ಪರಿಶೀಲಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು ಎಂದು ತಿಳಿಸಿದ್ದಾರೆ.
ತಮ್ಮನ ಪ್ರೇಮ ವಿವಾಹದಿಂದಾಗಿ ನಾಗೇಶ್ ಕೊಲೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಖಾಸಗಿ ಶಾಲಾ ಶಿಕ್ಷಕಿಯ ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿದ ದುಷ್ಕರ್ಮಿಗಳು
ಪತ್ನಿಯ ಕೊಂದು ದೇಹವನ್ನು ತುಂಡರಿಸಿ ಕಾಲುವೆಗೆ ಎಸೆದ ಪತಿ:ಇದು ಮೇದಕ್ ಕಥೆಯಾದರೆ, ಪಶ್ಚಿಮಬಂಗಾಳದಲ್ಲಿ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯ ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿನ 24 ಉತ್ತರ ಪರಗಣದ ಗ್ರಾಮವೊಂದರಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದ. ಬಳಿಕ ಆರೋಪಿ ವಿಷಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ನೂರುದ್ದೀನ್ ಮಂಡಲ್ (55) ಕೊಲೆ ಮಾಡಿದ ಆರೋಪಿ. ಸಾಯಿರಾ ಬಾನು ಮೃತರು. ಯಾವ್ಯಾವುದೋ ವಿಚಾರಕ್ಕಾಗಿ ಇಬ್ಬರ ಮಧ್ಯೆ ನಿತ್ಯವೂ ಕಿತ್ತಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆತ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರ ಎದುರು ಬಾಯ್ಬಿಟ್ಟಿದ್ದ.
ಕೆಲವು ದಿನಗಳಿಂದ ತನ್ನ ಪತ್ನಿ ಕಾಣುತ್ತಿಲ್ಲ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ಆರೋಪಿ ನೂರುದ್ದೀನ್ ದೂರು ನೀಡಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು ಎಲ್ಲ ಕೋನಗಳಿಂದ ವಿಚಾರಣೆ ನಡೆಸುತ್ತಿದ್ದರು. ದಂಪತಿಗೆ ಮಗಳಿದ್ದು, ಆಕೆಯನ್ನು ಪ್ರಶ್ನಿಸಿದ್ದರು. ಜೊತೆಗೆ ಆರೋಪಿಯನ್ನು ಹಲವಾರು ಬಾರಿ ವಿಚಾರಣೆಗೆ ಕರೆದಿದ್ದರು. ಈ ವೇಳೆ, ಆತ ನೀಡಿದ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ. ತನ್ನ ಹೇಳಿಕೆಗಳಿಂದ ಸಿಕ್ಕಿಬೀಳುವ ಭಯದಲ್ಲಿ ಆರೋಪಿ ಮನೆ ಬಿಟ್ಟು ಓಡಿ ಹೋಗಿ ವಿಷ ಸೇವಿಸಿದ್ದ.