ಹೈದರಾಬಾದ್: ಕೊರಿಯರ್ನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಸೈಬರ್ ಕಳ್ಳರು ವೈದ್ಯೆಗೆ ಬೆದರಿಸಿ ಹಣ ಸುಲಿಗೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಂಚಕರು ನಗರದ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾರೆ. ಮಲೇಷ್ಯಾದಿಂದ ದೆಹಲಿಗೆ ಕೊರಿಯರ್ ಕಂಪನಿ ಮೂಲಕ ತಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ನಿಮಗೆ ಬಂದಿರುವ ಕೊರಿಯರ್ನಲ್ಲಿ ಡ್ರಗ್ಸ್ ಇದೆ ಎಂದು ದೆಹಲಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಯಾರೋ ತಾನು ಸಿಬಿಐ ಕಾನ್ಸ್ಟೇಬಲ್ ಎಂದು ಕರೆ ಮಾಡಿದ್ದಾರೆ. ನಿಮ್ಮ (ವೈದ್ಯೆ) ಹೆಸರಿನ ಅರೆಸ್ಟ್ ವಾರಂಟ್ನ ಪ್ರತಿಯನ್ನು ವಾಟ್ಸ್ಆ್ಯಪ್ನಲ್ಲಿ ಹಾಕಲಾಗಿದೆ. ಆಕೆ ದೆಹಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೈಬರ್ ವಂಚಕ ಆ ಕಡೆಯಿಂದ ಹೇಳಿದ್ದಾನೆ. ಇಲ್ಲದಿದ್ದರೆ, ಮುಂದಿನ ಸಮಯದಲ್ಲಿ ನಿಮ್ಮನ್ನು ಹೈದರಾಬಾದ್ ಪೊಲೀಸರು ಗೃಹಬಂಧನದಲ್ಲಿ ಇರಿಸಲಿದ್ದಾರೆ. ತಾವು ತನಿಖೆಗೆ ಸಹಕರಿಸಬೇಕು ಎಂದು ವೈದ್ಯೆಗೆ ಬೆದರಿಕೆ ಹಾಕಿದ್ದಾರೆ.
ವೈದ್ಯೆಯು ಆರೋಪಿಗಳು ಹೇಳಿದಂತೆ ಎಲ್ಲವನ್ನೂ ಚಾಚು ತಪ್ಪದೇ ಪಾಲನೆ ಮಾಡಿದ್ದಾರೆ. ಬಳಿಕ ವ್ಯಕ್ತಿಯೋರ್ವ ತಾನು ಹಿರಿಯ ಸಿಬಿಐ ಅಧಿಕಾರಿ ಎಂದು ಹೇಳಿ, ಸುಮಾರು ಎರಡು ಗಂಟೆಗಳ ಕಾಲ ವಾಟ್ಸ್ಆ್ಯಪ್ ಮೂಲಕವೇ ವೈದ್ಯೆಯನ್ನು ತನಿಖೆಗೆ ಒಳಪಡಿಸಿದ್ದಾರೆ. ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ವಿಚಾರಿಸಿದ್ದಾನೆ.