ಅಹಮದಾಬಾದ್:ಗುಜರಾತ್ ಮತ್ತು ನೆರೆಯ ರಾಜಸ್ಥಾನದಲ್ಲಿ ಭಾರೀ ಡ್ರಗ್ಸ್ ಅವ್ಯವಹಾರ ಬಯಲಾಗಿದೆ. ನಿಷೇಧಿತ ಮೆಫೆಡ್ರೋನ್ ಡ್ರಗ್ಸ್ ಉತ್ಪಾದನಾ ಘಟಕಗಳ ಮೇಲೆ ಜಂಟಿ ದಾಳಿ ಮಾಡಿದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಭಾರೀ ಪ್ರಮಾಣದ ಅಫೀಮನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ 13 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಾದ ಅಹಮದಾಬಾದ್ ನಿವಾಸಿ ಮನೋಹರಲಾಲ್ ಎನಾನಿ ಮತ್ತು ರಾಜಸ್ಥಾನದ ಕುಲದೀಪ್ ಸಿಂಗ್ ರಾಜಪುರೋಹಿತ್ ಅವರು ಮೆಫೆಡ್ರೋನ್ ತಯಾರಿಕಾ ಘಟಕಗಳನ್ನು ಸ್ಥಾಪಿಸಿದ್ದಾರೆ ಎಂದು ಎಟಿಎಸ್‌ಗೆ ಸುಳಿವು ದೊರೆತ ನಂತರ, ಭಯೋತ್ಪಾದನಾ ನಿಗ್ರಹ ದಳ ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ 230 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಡ್ರಗ್ಸ್ ಕೇಸಲ್ಲಿ ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳಾದ ಎನಾನಿ, ರಾಜಪುರೋಹಿತ್ ಹಾಗೂ ಅವರ ಸಹಚರರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ರಾಜಸ್ಥಾನದ ಸಿರೋಹಿ ಮತ್ತು ಜೋಧ್‌ಪುರ, ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಪಿಪ್ಲಾಜ್ ಮತ್ತು ಭಕ್ತಿನಗರ ಕೈಗಾರಿಕಾ ಪ್ರದೇಶಗಳಲ್ಲಿ ಮಾದಕವಸ್ತುವನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ನಾಲ್ಕೂ ಘಟಕಗಳ ಮೇಲೆ ದಾಳಿ ದಾಳಿ ನಡೆಸಲಾಗಿದೆ.