ಮುಜಾಫರ್‌ನಗರ (ಉತ್ತರ ಪ್ರದೇಶ) : ಜಿಲ್ಲೆಯಲ್ಲಿ ಭಾನುವಾರ ಸಂಜೆ ನಿರ್ಮಾಣ ಹಂತದಲ್ಲಿದ್ದ ಎರಡು ಅಂತಸ್ತಿನ ಕಟ್ಟಡ ಕುಸಿದು ಭಾರಿ ಅವಘಡ ಸಂಭವಿಸಿದೆ. ಈ ವೇಳೆ ಹಲವು ಮಂದಿ ಮನೆಯ ಅವಶೇಷಗಳಡಿ ಸಿಲುಕಿದ್ದರು. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡ ಇದುವರೆಗೆ 15 ಮಂದಿಯನ್ನು ಅವಶೇಷಗಳಿಂದ ರಕ್ಷಿಸಿವೆ. ಈ ಅವಘಡದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಮೊರಾದಾಬಾದ್‌ನ ಬಿಲಾರಿ ನಿಯಾಮತ್‌ಪುರ ನಿವಾಸಿ ಮೋಹಿತ್ ಎಂದು ಗುರುತಿಸಲಾಗಿದೆ. ಈಗಾಗಲೇ ಹನ್ನೊಂದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ.
ಕಟ್ಟಡ ಕುಸಿತವಾದಾಗ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದು ಸಹಾಯ ಮಾಡಲು ಆರಂಭಿಸಿದ್ದಾರೆ. ಇದರೊಂದಿಗೆ ಅಲ್ಲಿದ್ದ ಕೆಲವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಡಿಐಜಿ ಅಜಯ್ ಸಾಹ್ನಿ, ಡಿಎಂ ಅರವಿಂದ ಮಲ್ಲಪ್ಪ ಬಂಗಾರಿ ಮತ್ತು ಎಸ್‌ಎಸ್‌ಪಿ ಅಭಿಷೇಕ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಜನಸತ್‌ನ ತಾಲ್ಡಾ ತಿರುವಿನಲ್ಲಿ ಮುರ್ಸಲಿನ್ ಎಂಬುವರ ಎರಡು ಅಂತಸ್ತಿನ ಮನೆ ಇದೆ. ಪಾಣಿಪತ್-ಖತಿಮಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿ ನಿರ್ಮಾಣದಿಂದಾಗಿ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಮನೆಗಳು ಸುಮಾರು ಎರಡರಿಂದ ಮೂರು ಅಡಿ ಆಳಕ್ಕೆ ಕುಸಿದಿವೆ. ಹೆದ್ದಾರಿ ನಿರ್ಮಾಣದಿಂದಾಗಿ ಮುರ್ಸಲಿನ್ ಅವರ ಮನೆಯೂ ಕೆಲವು ಅಡಿಗಳಷ್ಟು ಕೆಳಗೆ ಕುಸಿದಿದೆ. ಭಾನುವಾರ ಸಂಜೆ, ಮುರ್ಸಲಿನ್ ತನ್ನ ಮನೆಯ ಅಡಿಪಾಯವನ್ನು ಜ್ಯಾಕ್‌ನಿಂದ ಎತ್ತಿದ್ದಾರೆ. ಆದರೆ ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ನಿರ್ಮಾಣ ಹಂತದಲ್ಲಿದ್ದ ಐದಂತಸ್ತಿನ ಕಟ್ಟಡ ಕುಸಿತ: ಸಾವಿನ ಸಂಖ್ಯೆ 7ಕ್ಕೇರಿಕೆ