ಹೈದರಾಬಾದ್(ತೆಲಂಗಾಣ): ದೇಶದ ಅತಿದೊಡ್ಡ ಸಂಸದೀಯ ಕ್ಷೇತ್ರವಾಗಿರುವ ತೆಲಂಗಾಣದ ಮಲ್ಕಾಜ್‌ಗಿರಿಯಿಂದ ಸ್ಪರ್ಧಿಸಲು ಭಾರಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ, ಬಿಆರ್ಎಸ್ನಂತಹ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 114 ಅಭ್ಯರ್ಥಿಗಳಿಂದ 177 ನಾಮಪತ್ರ ಸಲ್ಲಿಕೆಯಾಗಿವೆ.
ಹೈದರಾಬಾದ್ ಹೊರವಲಯದ ವ್ಯಾಪ್ತಿಯನ್ನು ಮಲ್ಕಾಜ್‌ಗಿರಿ ಹೊಂದಿದೆ. ಅತ್ಯಧಿಕ 37.28 ಲಕ್ಷ ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಚುನಾವಣಾ ಆಯೋಗದ ಪ್ರಕಾರ, ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 895 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 348 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಬಹುತೇಕ ಸ್ವತಂತ್ರ ಅಭ್ಯರ್ಥಿಗಳೇ ಇದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಒಟ್ಟು 1,488 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಹಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಸೆಟ್‌ಗಳನ್ನು ಸಲ್ಲಿಸಿದ್ದಾರೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ. ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 29 ಕೊನೆಯ ದಿನಾಂಕವಾಗಿದ್ದು, ಮೇ 13ರಂದು ಮತದಾನ ನಡೆಯಲಿದೆ.
ಮಲ್ಕಾಜಿಗಿರಿ ಕ್ಷೇತ್ರದಲ್ಲಿ ಕೊನೆಯ ದಿನವೇ 63 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 114ಕ್ಕೆ ಏರಿಕೆಯಾಗಿದೆ. ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಹೊರವಲಯದಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹರಡಿರುವ ಚೆವೆಲ್ಲಾ ಕೇತ್ರಕ್ಕೆ 66 ಸ್ಪರ್ಧಿಗಳು ನಾಮಮತ್ರ ಸಲ್ಲಿಸಿದ್ದಾರೆ. ಇದು ರಾಜ್ಯದ ಎರಡನೇ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಒಟ್ಟು 88 ನಾಮಪತ್ರಗಳು ಸಲ್ಲಿಕೆಯಾಗಿವೆ.