ಒಬ್ಬ ಮಾಜಿ ಎಂಎಲ್ಎ ಹೇಳಿದ್ರೆ ಸಿಎಂ ಬದಲಾಗ್ತೇರೇನ್ರಿ?: ಸಚಿವ ಮಾಧುಸ್ವಾಮಿ - ಮುಖ್ಯಮಂತ್ರಿ ಬದಲಾವಣೆ
ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದಕ್ಕೆ ಸುರೇಶ್ ಗೌಡ ಯಾರ್ರೀ? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ ಸಿ ಮಾಧುಸ್ವಾಮಿ ಇಂದು ವಿಧಾನಸೌಧದಲ್ಲಿ ಗರಂ ಆದರು. ಒಬ್ಬ ಮಾಜಿ ಎಂಎಲ್ಎಗೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಾಮರ್ಥ್ಯ ಇದೆಯೇನ್ರೀ? ಹಾಗಾದರೆ ನಾವೆಲ್ಲ ಎಲ್ಲಿ ಹೋಗಬೇಕು? ಎಂದು ಆಕ್ರೋಶದಿಂದ ನುಡಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಥವಾ ರಾಷ್ಟ್ರೀಯ ಅಧ್ಯಕ್ಷರು ಹೇಳಿಕೆ ನೀಡಿದ್ದರೆ ನಾವು ಪ್ರತಿಕ್ರಿಯೆ ನೀಡಬಹುದು. ಅದನ್ನು ಬಿಟ್ಟು ಎಲ್ಲರ ಮಾತಿಗೆ, ಊಹಾಪೋಹಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.