ಬೆಳಗಾವಿ ದಸರಾ ವೈಭವಕ್ಕೆ ಅದ್ಧೂರಿ ತೆರೆ
ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ನಡೆದ ದಸರಾ ವೈಭವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಜೊತೆಗೆ ನಗರದ ಕ್ಯಾಂಪ್ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಗುರುವಾರ ಸಂಜೆ ವಿಜಯದಶಮಿ ಪ್ರಯುಕ್ತ ಅದ್ಧೂರಿಯಾಗಿ ಸೀಮೋಲ್ಲಂಘನೆ ಕಾರ್ಯಕ್ರಮ ಜರುಗಿತು. ಇಲ್ಲಿನ ಪಾಟೀಲ ಗಲ್ಲಿಯ ವತನದಾರ್ ಪಾಟೀಲ(ಪೊಲೀಸ್‌ಪಾಟೀಲ) ಮನೆತನದ ನೇತೃತ್ವದಲ್ಲೇ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಈ ವೇಳೆ ಶಾಸಕ ಅನಿಲ ಬೆನಕೆ, ಪೊಲೀಸ್ ಕಮೀಷನರ್ ಡಾ.ಎಂ.ಬಿ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ರಮಾಕಾಂತ ಕುಡೋಸ್ಕರ ದೇವಸ್ಥಾನಗಳ ಪಂಚ ಕಮೀಟಿ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಚವಾಟ್ ಗಲ್ಲಿಯ ಜ್ಯೋತಿಬಾ ಮಂದಿರದಿಂದ ಪಲ್ಲಕ್ಕಿ ಹಾಗೂ ಅಲಂಕೃತ ಎತ್ತಿನ ಮೆರವಣಿಗೆ ಆರಂಭಗೊಂಡಿತು. ಹುತಾತ್ಮ ಚೌಕ್ ಬಳಿ ವಿವಿಧ ದೇವಾಲಯಗಳ 11 ಪಲ್ಲಕ್ಕಿಗಳು ಸಮಾವೇಶಗೊಂಡು, ಮೆರವಣಿಗೆ ಮೂಲಕ ವಿವಿಧ ಮಾರ್ಗಗಳಲ್ಲಿ ಸಾಗಿ ವಿದ್ಯಾನಿಕೇತನ ಮೈದಾನ ತಲುಪಿದವು. ಅಲ್ಲಿ ಧಾರ್ಮಿಕ ಆಚರಣೆ ಪೂರ್ಣಗೊಂಡ ನಂತರ, ಬನ್ನಿ ಮುಡಿಯುವ ಮೂಲಕ ವೈಭವದ ದಸರಾಕ್ಕೆ ತೆರೆ ಎಳೆಯಲಾಯಿತು.