ರಾಷ್ಟ್ರೀಯ ಪಲ್ಸ್ ಪೋಲಿಯೋ ಕುರಿತು ಬಿಬಿಎಂಪಿಯಿಂದ ಜನಜಾಗೃತಿ ಜಾಥಾ
ಬೆಂಗಳೂರು: ಪಲ್ಸ್ ಪೋಲಿಯೋ ಕುರಿತು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಜಾಗೃತಿ ಜಾಥಾ ನಡೆಯಿತು. ಜನವರಿ19ರಂದು ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದವರೆಗಿನ ಮಕ್ಕಳಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಮನವಿ ಮಾಡಿದರು. ಪಾಲಿಕೆಯ ವತಿಯಿಂದ 135 ವಾರ್ಡ್ಗಳಲ್ಲಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 63 ವಾರ್ಡ್ಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗುತ್ತದೆ. 135 ವಾರ್ಡ್ಗಳಲ್ಲಿ 5,71,125 ಮಕ್ಕಳಿದ್ದು, 501 ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಮಕ್ಕಳ ಸಂಖ್ಯೆ 1,88,924. ಇಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು 1865 ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.