ಕಲಾಪದಲ್ಲಿ ಬಟ್ಟೆ ವಿಚಾರವಾಗಿ ಹಾಸ್ಯದ ಹೊಳೆ..ಸಿದ್ದರಾಮಯ್ಯ 90 ಸೆಟ್ ಉಡುಪಿನ ರಹಸ್ಯ ಗೊತ್ತೇ!?
ಜನ ಕೊಂಡುಕೊಳ್ಳುವ ಶಕ್ತಿಯಿದ್ದರ ತಾನೇ ಹೋಗುತ್ತಾರೆ. ಯಾರೋ ರೇವಣ್ಣನಂತವರು ಹೋಗಬಹುದು ಅಂಗಡಿಗೆ ಎಂದು ಹೆಚ್.ಡಿ.ರೇವಣ್ಣ ಕಾಲೆಳೆದರು. ಆಗ ಸದನದಲ್ಲಿ ಹಾಸ್ಯದ ವಾತಾವರಣ ಸೃಷ್ಟಿಯಾಯಿತು. ಬಳಿಕ ಮಾತು ಮುಂದುವರೆಸಿದ ಸಿದ್ದರಾಮಯ್ಯ, ನಾನು ಮೊನ್ನೆ ಬಟ್ಟೆ ತರಲು ಹೋಗಿದ್ದೆ. ಅದು ಸುದ್ದಿನೇ ಆಗಿಬಿಟ್ಟಿತು ಎಂದರು. ಅದಕ್ಕೆ ಸ್ಪೀಕರ್ ಕಾಗೇರಿ, ನೀವು ಬಹಳಷ್ಟು ಬಟ್ಟೆ ಕೊಂಡುಕೊಂಡಿದ್ದೀರಿ ಅದಕ್ಕೆ ಅದೆಲ್ಲಾ ಯಾರಿಗೆ ಎಂಬ ಪ್ರಶ್ನೆ ಎದ್ದಿದೆ ಎಂದು ನಗೆ ಚಟಾಕಿ ಹಾರಿಸಿದರು. ಅದಕ್ಕೆ ಸಿದ್ದರಾಮಯ್ಯ, ಯಾರಿಗೂ ಇಲ್ಲ. ನನ್ನೊಬ್ಬನಿಗೆ ಎಂದರು. ಆಗ ಗೃಹ ಸಚಿವ ಬೊಮ್ಮಾಯಿ, ಒಟ್ಟಿಗೆ 90 ಸೆಟ್ ತಂಗೊಡಿದ್ದೀರಂತೆ. ಒಟ್ಟಿಗೆ ಅಷ್ಟೊಂದು ಬಟ್ಟೆ ಕಥೆ ಏನು ಎಂದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಧೋತಿ ತಂದಿದ್ದು ಅಲ್ಲಿ ಹೋಗಿ. ನಾನು ಸ್ವಲ್ಪ ದಪ್ಪ ಆದರೂ ಅದು ನಡೆಯುತ್ತೆ ಎಂದು ಸಮಜಾಯಿಷಿ ನೀಡಿದರು. ಆಗ ಡಿಸಿಎಂ ಕಾರಜೋಳ, ಮುದುಕರಾಗಿದ್ದಾರಲ್ಲ ಚೆಂದವಾಗಿ ಕಾಣಲು ಕಲರ್ಫುಲ್ ಬಟ್ಟೆ ತೆಗೆದುಕೊಳ್ಳುತ್ತಿದ್ದಾರೆ ಎಂದರು. ಹೀಗೆ ಬಟ್ಟೆ ವಿಚಾರವಾಗಿ ಕಲಾಪದಲ್ಲಿ ಹಾಸ್ಯದ ಹೊಳೆ ಹರಿಯಿತು.