ಚಿಕ್ಕಮಗಳೂರಲ್ಲಿ ಕುಂದದ ಮಳೆರಾಯನ ಅಬ್ಬರ; ಚಾರ್ಮಾಡಿ ಘಾಟ್ನಲ್ಲಿ ತೀವ್ರ ಮಂಜು - ಧಾರಾಕಾರ ಮಳೆ 2020
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬೆಳಗ್ಗೆ ಧಾರಾಕಾರವಾಗಿ ಸುರಿದ ಮಳೆ ಸಂಜೆಯಾಗುತ್ತಲೇ ಜಿಟಿ-ಜಿಟಿಯಾಗಿ ಪ್ರಾರಂಭವಾಗುತ್ತಿದೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಮೂಡಿಗೆರೆ, ಕೊಪ್ಪ, ಎನ್ ಆರ್ ಪುರ, ಶೃಂಗೇರಿ, ಚಿಕ್ಕಮಗಳೂರು ತಾಲೂಕಿನಲ್ಲಿಯೂ ಮಳೆ ಮುಂದುವರೆದಿದೆ. ಜಿಲ್ಲಾದ್ಯಂತ ಈವರೆಗೂ ಮೋಡ ಕವಿದ ವಾತಾವರಣವಿದ್ದು ಮೈ ಕೊರೆಯುವ ಚಳಿಯ ನಡುವೆ ಜಿಟಿ-ಜಿಟಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಉಂಟಾಗಿದೆ. ಚಾರ್ಮಾಡಿ ಘಾಟ್ ಹಾಗೂ ಕೊಟ್ಟಿಗೆಹಾರದಲ್ಲಿ ಸಂಪೂರ್ಣ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಪ್ರಮಾಣ ಹೆಚ್ಚಳವಾಗಿದೆ.