ಒಕ್ಕಲಿಗರ ಮೀಸಲಾತಿ ಕಡಿತಗೊಳಿಸಿದ್ದು ದೇವೇಗೌಡರು, ಅವರ ವಿರುದ್ಧ ಯಾರೂ ಮಾತನಾಡಲಿಲ್ಲ; ಎ. ಮಂಜು
ಹಾಸನ: ಒಕ್ಕಲಿಗರಿಗೆ ಶೇಕಡಾ 15 ರಷ್ಟು ಮೀಸಲಾತಿ ಇದ್ದುದನ್ನು 4ರಷ್ಟು ಕಡಿತಗೊಳಿಸಿ ಶೇ 11ಕ್ಕೆ ಇಳಿಸಿದವರು ಇದೇ ಒಕ್ಕಲಿಗ ಸಮುದಾಯದ ಮಾಜಿ ಪ್ರಧಾನಿ ದೇವೇಗೌಡರು. ಆದರೆ ಅವತ್ತು ಯಾರೂ ದೇವೇಗೌಡರ ವಿರುದ್ಧ ಮಾತನಾಡಲಿಲ್ಲ ಎಂದು ಮಾಜಿ ಸಚಿವ ಎ. ಮಂಜು ಮೀಸಲಾತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಹೊಳೆನರಸೀಪುರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮೀಸಲಾತಿ ಕೇಳುವುದು ಹಕ್ಕು, ಅದನ್ನು ನಾನು ತಪ್ಪು ಎನ್ನುವುದಿಲ್ಲ, ಆದರೆ ಮತ ಬೇಟೆಗಾಗಿ ಕೇಳುವುದು ತಪ್ಪು. ಅದರ ಬದಲು ಶೈಕ್ಷಣಿಕ ಮತ್ತು ಆರ್ಥಿಕತೆಯ ಬಳಕೆಗಾಗಿ ನೀಡಿದರೆ ಒಳಿತು ಎನ್ನುವುದು ನನ್ನ ಭಾವನೆ. ದೇವೇಗೌಡರು ಒಕ್ಕಲಿಗರಿಗೆ ಮೀಸಲಾತಿ ಕಡಿಮೆ ಮಾಡಿ ಶೇ 4 ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡಿದಾಗ ಅವರ ವಿರುದ್ಧವಾಗಲಿ ಅಥವಾ ಮೀಸಲಾತಿ ಕಡಿಮೆ ಮಾಡಿದ ವಿಚಾರದ ವಿರುದ್ಧ ಯಾರೂ ಮಾತನಾಡಲೇ ಇಲ್ಲ. ಇವತ್ತು ಮೀಸಲಾತಿ ಬಗ್ಗೆ ಮಾತನಾಡಲು ಯಾರಿಗಿದೆ ನೈತಿಕತೆ ಎಂದು ಟೀಕಾಪ್ರಹಾರ ಮಾಡಿದರು.