ಹಂಪಿ ಉತ್ಸವ: ಕನ್ನಡ ಹಾಡು ಹಾಡದ್ದಕ್ಕೆ ಆಕ್ರೋಶ; ಕೈಲಾಶ್ ಖೇರ್ ಬಳಿಗೆ ಬಾಟಲಿ ಎಸೆತ - ETV Bharat kannada News
ವಿಜಯನಗರ :ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹಂಪಿ ಉತ್ಸವ-2023ಕ್ಕೆ ಭಾನುವಾರ ತೆರೆಬಿತ್ತು. ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಬಾಲಿವುಡ್‌ನ ಕೈಲಾಶ್ ಖೇರ್ ಅವರ ಹಾಡುಗಳು ಭರಪೂರ ಮನರಂಜನೆ ಒದಗಿಸಿತು. ಆದರೆ, ಸಮಾರೋಪ ಸಮಾರಂಭದಲ್ಲಿ ಕನ್ನಡ ಹಾಡು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ವೇದಿಕೆಯ ಮೇಲೆ ಕೆಲವು ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಪುಂಡಾಟ ಮೆರೆದಿದ್ದಾರೆ. ಕಿಡಿಗೇಡಿಗಳು ಬಾಟಲಿ ಎಸೆದರೂ ಕೈಲಾಶ್ ತಮ್ಮ ಗಾಯನ ಮುಂದುವರೆಸಿದ್ದರು. ಘಟನೆ ಸಂಬಂಧ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ತನಿಖೆ ನಡೆಯುತ್ತಿದೆ.
ಉತ್ಸವದಲ್ಲಿ ಕೈಲಾಸ ಕೇರ್ ಅವರು ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ ಹಾಡು ಹಾಡುವ ಮೂಲಕ ಅಪ್ಪುಗೆ ಸಂಗೀತ ಗೌರವ ಸಲ್ಲಿಸಿದರು. ಪುನೀತ್ ಚಿತ್ರಗಳ ಹಾಡುಗಳ ಜೊತೆಗೆ ಕನ್ನಡದ ಇತರ ಹಾಡುಗಳ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಇದರೊಂದಿಗೆ ಭಾವನಾತ್ಮಕವಾಗಿ ಹಂಪಿ ಉತ್ಸವಕ್ಕೆ ತೆರೆಬಿದ್ದಿತು.
ಜನವರಿ 27ರಿಂದ 29ರವರೆಗೆ ಮೂರು ದಿನಗಳಿಂದ ಹಂಪಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಮುಖ್ಯ ವೇದಿಕೆಯಾದ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸಿವೆಕಾಳು ಗಣಪ ವೇದಿಕೆ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ಪರಂಪರೆಯ ಬೆಳಕಿನಲ್ಲಿ ಸಂಸ್ಕೃತಿಯ ಸೊಬಗು ಅನಾವರಣಗೊಂಡಿತು. ಉತ್ಸವದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ವಿದೇಶಿ ಪ್ರವಾಸಿಗರೂ ಅತ್ಯುತ್ಸಾಹದಿಂದ ಪಾಲ್ಗೊಂಡರು. ವಿಜಯನಗರ ವಸಂತ ವೈಭವ, ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳು, ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನೂ ಆಸ್ವಾದಿಸಿದರು.
ಇದನ್ನೂ ಓದಿ:ವಿಜಯನಗರ ವೈಭವದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದೆ: ಶಶಿಕಲಾ ಜೊಲ್ಲೆ