ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಿಳೆ: ವೈದ್ಯಕೀಯ ಚಿಕಿತ್ಸೆಗಾಗಿ ಫುಟ್ಬಾಲ್ ಪಂದ್ಯ ನಡೆಸಿದ ಗ್ರಾಮಸ್ಥರು
ನೀಲಗಿರಿ(ತಮಿಳುನಾಡು): ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ನೀಲಗಿರಿಯ ಮಹಿಳೆಯ ವೈದ್ಯಕೀಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಗ್ರಾಮಸ್ಥರು ಫುಟ್‌ಬಾಲ್ ಪಂದ್ಯಾವಳಿ ನಡೆಸಿದರು. ಯುವ ವೇದಿಕೆಯ ಸಹಾಯದಿಂದ ಸ್ಥಳೀಯ ನಿವಾಸಿಗಳು ಕೋಟಗಿರಿ ಸಮೀಪದ ಕಂಬಟ್ಟಿ ಗ್ರಾಮದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿ ₹ 4 ಲಕ್ಷ ಸಂಗ್ರಹಿಸಿ ಕಿಡ್ನಿ ರೋಗಿಯ ಚಿಕಿತ್ಸೆಗೆ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಶ್ವಿನಿ ಕೋಟಗಿರಿ ಸಮೀಪದ ಕಡಕಂಪಟ್ಟಿ ಗ್ರಾಮದವರು. ಇವರಿಗೆ ಎರಡೂ ಕಿಡ್ನಿಗಳು ವಿಫಲವಾಗಿರುವುದನ್ನು ವೈದ್ಯರು ಇತ್ತೀಚೆಗೆ ದೃಢಪಡಿಸಿದ್ದರು. ಬಡ ಕುಟುಂಬಕ್ಕೆ ಸೇರಿದ ಅವರು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ಕಸಿ ಮಾಡಲು ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇದನ್ನು ತಿಳಿದ ಗ್ರಾಮಸ್ಥರು ಚಿಕಿತ್ಸೆಗಾಗಿ ನಾನಾ ರೀತಿಯಲ್ಲಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಇದರ ನಿಮಿತ್ತ ಕಂಬಟ್ಟಿ ಭಾರತಿ ಯೂತ್ ಕ್ಲಬ್ನಿಂದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆ ಹಣವನ್ನು ಅಶ್ವಿನಿ ಅವರ ಚಿಕಿತ್ಸೆಗೆ ನೀಡಲು ನಿರ್ಧರಿಸಿದರು. ಕಳೆದ ವಾರ ಅವರು ಫುಟ್ಬಾಲ್ ಪಂದ್ಯಗಳನ್ನು ಪ್ರಾರಂಭಿಸಿದರು. ಒಟ್ಟು 16 ಪಂದ್ಯಗಳು ನಡೆದಿವೆ. ಮಹಿಳೆಯ ಚಿಕಿತ್ಸೆಗಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ ಫುಟ್ಬಾಲ್ ಪಂದ್ಯ ಇದಾಗಿದೆ. ಈ ಸ್ಪರ್ಧೆಯ ಮೂಲಕ ಪಡೆದ 4 ಲಕ್ಷ ಹಣವನ್ನು ಅಶ್ವಿನಿಯ ವೈದ್ಯಕೀಯ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
"ಕಿಡ್ನಿ ಕಸಿ ಮಾಡಿಸಲು ಹಣವಿಲ್ಲದೆ ಆಕೆಯ ಕುಟುಂಬ ಪರದಾಡುತ್ತಿದ್ದರು. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಫುಟ್ಬಾಲ್ ಪಂದ್ಯಗಳ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದೆವು'' ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ಇದನ್ನೂ ಓದಿ: ಕಿಡ್ನಿ ವೈಫಲ್ಯ: ಬಡ ಬಾಲಕನ ನೆರವಿಗೆ ಬಂದ ಅಪ್ಪು ಅಭಿಮಾನಿಗಳು, ಹೆಚ್ಚಿನ ಸಹಾಯಕ್ಕೆ ಮೊರೆ