ಚಿರತೆ ದಾಳಿ: ತಿರುಮಲ ಬೆಟ್ಟ ಹತ್ತಲು ಹೊಸ ರೂಲ್ಸ್ - ಆಂಧ್ರಪ್ರದೇಶ
ತಿರುಪತಿ(ಆಂಧ್ರಪ್ರದೇಶ):ಚಿರತೆ ದಾಳಿ ಹಿನ್ನೆಲೆ ತಿರುಪತಿ ದೇವಸ್ಥಾನದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೆಂಕಟೇಶ್ವರ ದರ್ಶನಕ್ಕೆ ಮಕ್ಕಳೊಂದಿಗೆ ಬೆಟ್ಟ ಹತ್ತುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹೊಸ ನಿಯಮಗಳನ್ನು ಪ್ರಕಟಿಸಲಾಗಿದೆ.
ಭಕ್ತರ ಸುರಕ್ಷತೆ ಮತ್ತು ಭದ್ರತೆಯು ತಿರುಮಲ ತಿರುಪತಿ ದೇವಸ್ಥಾನಗಳ ಪ್ರಮುಖ ಆದ್ಯತೆಯಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ. ಕರುಣಾಕರ ರೆಡ್ಡಿ ಹೇಳಿದ್ದಾರೆ. ಇತ್ತೀಚೆಗಷ್ಟೇ ತಿರುಮಲದಲ್ಲಿ ಇಬ್ಬರು ಮಕ್ಕಳ ಮೇಲೆ ಚಿರತೆ ದಾಳಿ ನಡೆದ ಹಿನ್ನೆಲೆ ಟಿಟಿಡಿ ಅಧ್ಯಕ್ಷರು ತಿರುಪತಿಯಲ್ಲಿ ಜಿಲ್ಲಾ ಮತ್ತು ಅರಣ್ಯಾಧಿಕಾರಿಗಳೊಂದಿಗೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಟಿಟಿಡಿ ತೆಗೆದುಕೊಂಡ ನಿರ್ಧಾರಗಳ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಪೋಷಕರು ಫುಟ್‌ಪಾತ್ ಮಾರ್ಗಗಳಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಜತೆಗೆ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ದ್ವಿಚಕ್ರ ವಾಹನಗಳಿಗೆ ಘಾಟಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬ ಭಕ್ತರಿಗೆ ಕೋಲು ನೀಡಲಾಗುವುದು. ಯಾತ್ರಾರ್ಥಿಗಳನ್ನು ಸಿಬ್ಬಂದಿಯ ಜತೆಗೆ ಗುಂಪುಗಳಲ್ಲಿ ಕಳುಹಿಸಲು ನಿರ್ಧರಿಸಲಾಗಿದೆ.
ಜತೆಗೆ ಅಲಿಪಿರಿ ಹಾಗೂ ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿಗಳನ್ನು ತೆರೆಯಲಾಗಿದೆ. ಇಲ್ಲಿ ಮಕ್ಕಳು ಹಾಗೂ ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಕಟ್ಟಿ ಕಳುಹಿಸಲಾಗುತ್ತಿದೆ. ಪೊಲೀಸ್ ಚೌಕಿಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಪೋಷಕರ ವಿವರಗಳನ್ನು ದಾಖಲಿಸಲಾಗುತ್ತಿದೆ. ಪಾಲಕರು ಮಕ್ಕಳನ್ನು ಕೈಬಿಡದಂತೆ ಹಾಗೂ ಮಕ್ಕಳು ಪಾಲಕರನ್ನು ಬಿಟ್ಟಿರದಂತೆ ಸೂಚನೆ ನೀಡಲಾಗುತ್ತಿದೆ. ಒಂದೊಮ್ಮೆ ಪಾಲಕರಿಂದ ಮಕ್ಕಳು ಪ್ರತ್ಯೇಕಗೊಂಡರೆ ಕೈಗೆ ಕಟ್ಟಿರುವ ಟ್ಯಾಗ್ ಮೂಲಕ ಪಾಲಕರ ಪತ್ತೆ ಕಾರ್ಯ ನಡೆಸಲಾಗುವುದು.
ಪ್ರಾಣಿಗಳಿಗೆ ಆಹಾರ ಪದಾರ್ಥಗಳನ್ನು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿ ಮಾರ್ಗದ ಹೋಟೆಲ್ ಮಾಲೀಕರಿಗೆ ಆಹಾರ ತ್ಯಾ ಜ್ಯವನ್ನು ಎಸೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. 500 ಸಿಸಿಟಿವಿ ಕ್ಯಾಮೆರಾ, ಫೋಕಸ್ ಲೈಟ್ಗಳನ್ನು ಅಳವಡಿಸಲಾಗುತ್ತಿದೆ.
ಇದನ್ನೂ ಓದಿ:ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ: 6 ವರ್ಷದ ಮಗು ಸಾವು