ತೋಟದಲ್ಲೇ ಕೊಳೆಯುತ್ತಿದೆ ದ್ರಾಕ್ಷಿ: ರಸ್ತೆ ಸಂಪರ್ಕಕ್ಕೆ ಗ್ರಾಮಸ್ಥರ ಮನವಿ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ್ ಗ್ರಾಮದ ಇಂಗಳಗಿ ತೋಟದ ವಸತಿ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲ. ಇಲ್ಲಿಯ 20 ಕುಟುಂಬಗಳು ನಿತ್ಯ ಸಂಕಷ್ಟಪಡುತ್ತಿವೆ. ತೆಲಸಂಗ್ ಗ್ರಾಮದಿಂದ ಒಂದೇ ಒಂದು ಕಿಲೋಮೀಟರ್ ಅಂತರದಲ್ಲಿರುವ ಇಂಗಳಗಿ ತೋಟದ ವಸತಿ ಪ್ರದೇಶಕ್ಕಿದ್ದ ರಸ್ತೆ ಕಳೆದ ಎರಡು ವರ್ಷಗಳಿಂದ ಬಂದಾಗಿದೆ.
ಶಾಲಾ ಮಕ್ಕಳು, ರೈತರು, ವಯೋವೃದ್ಧರು ಹಾಗು ರೋಗಿಗಳು ತೊಂದರೆಗೀಡಾಗಿದ್ದಾರೆ. ಈ ಹಿಂದೆ ಪರ್ಯಾಯ ಮಾರ್ಗವಾಗಿ ಬೇರೆಯವರ ಜಮೀನಿನಿಂದ ಹಾದು ಬರುತ್ತಿದ್ದೆವು. ಆ ಜಮೀನಿನಲ್ಲೂ ಕೃಷಿ ಚಟುವಟಿಕೆ ಮಾಡಿದ್ದು ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ರಸ್ತೆ ಇಲ್ಲದ ಕಾರಣ ಬೆಳೆದ ಬೆಳೆ ಕೊಯ್ಲು ಮಾಡಲಾಗದೇ ಎರಡು ಎಕರೆ ದ್ರಾಕ್ಷಿ ಬೆಳೆ ತೋಟದಲ್ಲಿಯೇ ಕೊಳೆಯುತ್ತಿದೆ. ಈಗಾಗಲೇ ಹಲವು ಬೆಳೆಗಳನ್ನು ಬೆಳೆದಿದ್ದೇವೆ. ಆದರೆ ಸ್ಥಳಕ್ಕೆ ವಾಹನಗಳು ಬಾರದೇ ಇರುವುದರಿಂದ ಬೆಳೆ ರಾಶಿ ಮಾಡದೇ ಹಾಗೆಯೇ ಬಿಟ್ಟಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬಾವಿಗೆ ಬಿದ್ದ ಶ್ವಾನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ: ಕಾರ್ಯಾಚರಣೆಯ ವಿಡಿಯೋ