ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ್ ಭಾವಚಿತ್ರ ಇರುವ ಗಡಿಯಾರ, ಟೀ ಶರ್ಟ್ ಪತ್ತೆ
ವಿಜಯಪುರ : ಮುದ್ದೇಬಿಹಾಳ ತಾಲೂಕಿನ ಯರಗಲ್ಲದ ಬಾಲಾಜಿ ಸಕ್ಕರೆ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿ ನಡೆಸಿರುವ ಚುನಾವಣಾ ಅಧಿಕಾರಿಗಳು ದಾಸ್ತಾನಿರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಚುನಾವಣಾಧಿಕಾರಿ ಸುರೇಶ ಭಾವಿಕಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ. ಬೀಳಗಿಯ ಮಾಜಿ ಶಾಸಕ ಎಸ್.ಆರ್.ಪಾಟೀಲರ ಭಾವಚಿತ್ರ ಹಾಗೂ ಹೆಸರುಳ್ಳ ಗಡಿಯಾರ ಮತ್ತು ಟೀ ಶರ್ಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲನೆಯಲ್ಲಿ 22 ಲಕ್ಷ ರೂಪಾಯಿ ರಶೀದಿ ಪತ್ತೆಯಾಗಿದ್ದು, ತನಿಖೆ ಸಾಗಿದೆ.
ಚುನಾವಣಾ ಸೆಕ್ಟರ್ ಆಫೀಸರ್ ಸುರೇಶ ಭಾವಿಕಟ್ಟಿ ಮಾತನಾಡಿ, ಗೋದಾಮಿನಲ್ಲಿ ಅಪಾರ ಪ್ರಮಾಣದ ಸರಕು ದೊರೆತಿದೆ. ಇವುಗಳನ್ನು ಯಾಕೆ ತರಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಈ ಬಗ್ಗೆ ಮುದ್ದೇಬಿಹಾಳ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ ಪವಾರ ಅವರಿಗೆ ತಿಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಕಾರ್ಯಾಚರಣೆಯಲ್ಲಿ ಪಿಎಸ್ಐ ಆರೀಫ್ ಮುಶಾಪೂರಿ, ಕಂದಾಯ ಅಧಿಕಾರಿ ಸುನೀಲ ಚವ್ಹಾಣ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಇದ್ದರು. ಸ್ಥಳಕ್ಕೆ ವಿಜಯಪುರ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದ ಕುಮಾರ್ ಭೇಟಿ ನೀಡಿದ್ದಾರೆ. ರಾತ್ರಿಯಿಡೀ ಸರಕುಗಳ ಮೌಲ್ಯಮಾಪನ ಕಾರ್ಯ ನಡೆದಿದೆ.
ಇದನ್ನೂ ಓದಿ :ಮಂಗಳೂರು: ಐಸ್ಕ್ರೀಮ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ