ಗೋವಾಕ್ಕೆ ಹಾರಾಟ ನಡೆಸದ ಸ್ಟಾರ್ ಏರ್ಲೈನ್ಸ್; ಪ್ರಯಾಣಿಕರು ತರಾಟೆ ತೆಗೆದುಕೊಂಡ ವಿಡಿಯೋ ವೈರಲ್ - ವೈರಲ್ ವಿಡಿಯೋ
Published : Dec 21, 2023, 9:04 AM IST
ಶಿವಮೊಗ್ಗ: ಶಿವಮೊಗ್ಗದಿಂದ ಗೋವಾಕ್ಕೆ ಹಾರಾಟ ನಡೆಸಬೇಕಿದ್ದ ಸ್ಟಾರ್ ಏರ್ಲೈನ್ಸ್ ವಿಮಾನ ಹಠಾತ್ ರದ್ದಾದ ಕಾರಣ ಪ್ರಯಾಣಿಕರು, ಏರ್ಲೈನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸ್ಟಾರ್ ಏರ್ಲೈನ್ಸ್ ವಿಮಾನ ಶಿವಮೊಗ್ಗ ನಿಲ್ದಾಣದಿಂದ ಬುಧವಾರ ಬೆಳಗ್ಗೆ ಸರಿಯಾದ ಸಮಕ್ಕೆ ಗೋವಾಕ್ಕೆ ಹಾರಬೇಕಿತ್ತು. ಆದರೆ, ಸಂಸ್ಥೆಯು ತಾಂತ್ರಿಕ ಕಾರಣ ನೀಡಿ ವಿಮಾನ ಹಾರಾಟವನ್ನು ರದ್ದುಪಡಿಸಿತ್ತು. ಇದರಿಂದ ಸುಮಾರು 50 ಜನ ಪ್ರಯಾಣಿಕರು ಪರದಾಡುವಂತಾಗಿತ್ತು.
ಇದರಿಂದ ಪ್ರಯಾಣಿಕರು ಸಂಸ್ಥೆಯ ಸಿಬ್ಬಂದಿ ಜೊತೆ ಮಾತನಾಡಬೇಕೆಂದು ಸಾಕಷ್ಟು ಒತ್ತಾಯ ಮಾಡಿದ್ದರು. ಒತ್ತಾಯದ ಬಳಿಕ ಓರ್ವ ಸಿಬ್ಬಂದಿ ಆಗಮಿಸಿ, ವಿಮಾನ ಹಾರಾಟಕ್ಕೆ ವಾತಾವರಣ ಸರಿಯಾಗಿ ಇರದ ಕಾರಣ ವಿಮಾನ ಹಾರಾಟ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಇದರಿಂದ ಪ್ರಯಾಣಿಕರು ನಮಗೆ ಬೇರೆ ವಿಮಾನ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಹೋದಾಗ, ತಮ್ಮ ಟಿಕೆಟ್ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೇ ವಿಮಾನ ಮಂಗಳವಾರವೂ ಸಹ ಇದೇ ರೀತಿ ತಾಂತ್ರಿಕ ಕಾರಣ ನೀಡಿ ಹಾರಾಟ ರದ್ದು ಮಾಡಿತ್ತು.
ಸ್ಟಾರ್ ಏರ್ಲೈನ್ಸ್ ವಿಮಾನವು ನಿತ್ಯ ಹೈದರಾಬಾದ್ನಿಂದ ಶಿವಮೊಗ್ಗಕ್ಕೆ ಬೆಳಗ್ಗೆ ಬರುತ್ತದೆ. ಶಿವಮೊಗ್ಗದಿಂದ ತಿರುಪತಿಗೆ ಪ್ರಯಾಣ ಬೆಳೆಸುತ್ತದೆ. ತಿರುಪತಿಯಿಂದ ಬರುವ ವಿಮಾನವು ಗೋವಾಕ್ಕೆ ಹೋಗುತ್ತದೆ. ಗೋವಾದಿಂದ ವಾಪಾಸ್ ಶಿವಮೊಗ್ಗಕ್ಕೆ ಬರುವ ವಿಮಾನವು ಸಂಜೆ ಹೈದರಾಬಾದ್ಗೆ ಪ್ರಯಾಣ ಬೆಳೆಸುತ್ತದೆ.
ಇದನ್ನೂ ಓದಿ:ಪ್ರಯಾಣಿಕನಿಗೆ ಹೃದಯಾಘಾತ: ಪಾಕಿಸ್ತಾನದ ಕರಾಚಿಯಲ್ಲಿ ಸ್ಪೈಸ್ಜೆಟ್ ವಿಮಾನ ತುರ್ತು ಲ್ಯಾಂಡಿಂಗ್