ಬಾಗಲಕೋಟೆ: ಅವ್ಯವಸ್ಥೆಗೆ ಖಂಡನೆ.. ದುರಸ್ತಿಗೆ ಒತ್ತಾಯಿಸಿ ಗುಂಡಿ ಬಿದ್ದ ದಾರಿಯಲ್ಲೇ ವ್ಯಕ್ತಿ ಉರುಳು ಸೇವೆ.. ಅಧಿಕಾರಿಗಳ ವಿರುದ್ಧ ಆಕ್ರೋಶ
ಬಾಗಲಕೋಟೆ :ರಸ್ತೆಯಲ್ಲಿರುವ ಗುಂಡಿ ದುರಸ್ತಿ ಮಾಡುವಂತೆ ಒತ್ತಾಯಿಸಿ ವ್ಯಕ್ತಿಯೋರ್ವ ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಮಲ್ಲಿಕಾರ್ಜುನ ಬಾದಾಮಿಮಠ ಎಂಬ ವ್ಯಕ್ತಿ ಇಂತಹ ವಿನೂತನ ಪ್ರತಿಭಟನೆ ಮಾಡಿ, ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಗುಳೇದಗುಡ್ಡ ಪಟ್ಟಣದಿಂದ ಕಮತಗಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದರೆ ಸಾಕು, ರಸ್ತೆyಓ ಹೊಂಡವೋ ಎಂಬುದು ತಿಳಿಯದೆ ಸಾರ್ವಜನಿಕರು ಪರದಾಡುವಂತಾಗಿದೆ. ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಸೂಕ್ತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಕಳೆದ ನಾಲ್ಕು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಮಲ್ಲಿಕಾರ್ಜುನ ಹೇಳಿದ್ದಾರೆ.
ಇದರಿಂದ ಬೇಸತ್ತು ಇಂದು ರಸ್ತೆ ಮೇಲೆ ಇರುವ ತಗ್ಗಿನಲ್ಲಿ ನಿಂತಿರುವ ನೀರಲ್ಲೇ ಉರುಳು ಸೇವೆ ಮಾಡುವ ಮೂಲಕ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಚೇರಿಗಳಿಗೆ ಅಲೆದು ಅಲೆದು, ಕಾಗದಪತ್ರಗಳ ವ್ಯವಹಾರ ಮಾಡಿ ಬೇಸತ್ತು ಕೊನೆಗೆ ರಸ್ತೆ ಮೇಲೆ ಉರುಳುತ್ತಾ ಅಧಿಕಾರಿಗಳ ಅಸಡ್ಡೆಗೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆಯಾದರೂ ಅಧಿಕಾರಿಗಳು ಕಣ್ಣು ತೆರೆಯದೆ ಇದ್ದಲ್ಲಿ ಉಗ್ರರೂಪದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ತಕ್ಕ ಪಾಠ: ಸ್ಥಳೀಯರಿಂದ್ಲೇ ರಸ್ತೆ ದುರಸ್ಥಿ, ಶಾಸಕರಿಗೆ ಛೀಮಾರಿ