Watch.. ಪ್ಯಾರಿಸ್ಗೆ ಬಂದಿಳಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಫ್ರಾನ್ಸ್ ಪಿಎಂ.. - French National Day
ಪ್ಯಾರಿಸ್ (ಫ್ರಾನ್ಸ್):ಎರಡು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜಧಾನಿ ಪ್ಯಾರಿಸ್ಗೆ ಬಂದಿಳಿದರು. ವಿಮಾನ ನಿಲ್ದಾಣಕ್ಕೆ ಖುದ್ದು ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಆಗಮಿಸಿ ಮೋದಿ ಅವರನ್ನು ಬರಮಾಡಿಕೊಂಡರು. ಇದೇ ವೇಳೆ, ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ಸೇನಾ ಪಡೆಗಳಿಂದ ಪಿಎಂ ಮೋದಿ ಗೌರವವನ್ನೂ ಸ್ವೀಕರಿಸಿದರು. ಜೊತೆಗೆ ಪ್ಯಾರಿಸ್‌ನಲ್ಲಿ ತಮ್ಮನ್ನು ನೋಡಲು ನೆರೆದಿದ್ದ ಭಾರತೀಯ ಸಮುದಾಯದ ಜನರನ್ನು ಪ್ರಧಾನಿ ಮೋದಿ ಭೇಟಿಯಾದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಪ್ಯಾರಿಸ್ಗೆ ಭೇಟಿ ನೀಡಿದ್ದಾರೆ. ಏಪ್ರಿಲ್ 14ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಗೌರವ ಅತಿಥಿಯಾಗಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಮೂರು ಸೇನಾ ತುಕಡಿಗಳು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿವೆ. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಮಾನವು ಫ್ಲೈ-ಪಾಸ್ಟ್ ಅನ್ನು ಪ್ರದರ್ಶಿಸಲಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಎರಡೂ ರಾಷ್ಟ್ರಗಳ ಪ್ರಮುಖ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಿಂದ ಪ್ರಯಾಣ ಬೆಳೆಸಿದ್ದರು. ಭಾರತ ಮತ್ತು ಫ್ರಾನ್ಸ್ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಆರಂಭವಾಗಿ 25 ವರ್ಷಗಳು ಆಗಿದ್ದು, ತಮ್ಮ ಭೇಟಿಯು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಉತ್ತೇಜನೆಯನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಫ್ರಾನ್ಸ್ಗೆ ತೆರಳುವ ಮುನ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಫ್ರಾನ್ಸ್ ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ನೀಲಿ ಆರ್ಥಿಕತೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತವೆ ಎಂದು ಅವರು ತಿಳಿಸಿದ್ದರು. ಜುಲೈ 15ರಂದು ಪ್ಯಾರಿಸ್‌ನಿಂದ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಗೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ:ಫ್ರಾನ್ಸ್‌ನಿಂದ ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್‌ಗಳ ಖರೀದಿಗೆ ಅನುಮೋದನೆ