ಬೆಳಗಾವಿ: ಇಂಡಿಯಾ ಆಸ್ಟ್ರೇಲಿಯಾ ಫೈನಲ್ ಮ್ಯಾಚ್, ಎಲ್ಇಡಿ ಪರದೆ ಮೇಲೆ ವೀಕ್ಷಿಸಲು ಮುಗಿಬಿದ್ದ ಜನ - ಶಾಹಪುರದ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್
Published : Nov 19, 2023, 9:12 PM IST
ಬೆಳಗಾವಿ:ಇಲ್ಲಿನ ಸರ್ದಾರ್ಸ್ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳು ಮುಗಿ ಬಿದ್ದಿದ್ದರು. ಕಿಕ್ಕಿರಿದು ಸೇರಿದ್ದ ಜನ ಚೆಕ್ ದೇ ಇಂಡಿಯಾ ಎಂದು ಘೋಷಣೆ ಮೊಳಗಿಸಿ ಭಾರತ ತಂಡಕ್ಕೆ ಪ್ರೋತ್ಸಾಹಿಸಿದರು.
ಸರ್ದಾರ್ಸ್ ಮೈದಾನದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ಫೈನಲ್ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಎಲ್ಇಡಿ ವ್ಯವಸ್ಥೆ ಮಾಡಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಸೇರಿದ್ದ ಜನಸ್ತೋಮ ಫೈನಲ್ ಪಂದ್ಯ ಕಣ್ತುಂಬಿಕೊಂಡಿತು.
ಮೊದಲು ಭಾರತ ಬ್ಯಾಟಿಂಗ್ ವೀಕ್ಷಿಸಿದ ಅಭಿಮಾನಿಗಳು 240 ರನ್ ಮಾತ್ರ ಗಳಿಸಿದ ಹಿನ್ನೆಲೆ ಕೊಂಚ ಬೇಸರದಲ್ಲಿದ್ದರು. ನಂತರ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ವೇಳೆ ಪ್ರತಿ ವಿಕೆಟ್ ಹೋದಾಗಲೂ ಶಿಳ್ಳೆ, ಚಪ್ಪಾಳೆ ಹೊಡೆದು, ಪಟಾಕಿ ಸಿಡಿಸಿ ಕ್ರೀಡಾಭಿಮಾನಿಗಳು ಸಂಭ್ರಮಿಸಿದರು. ಇನ್ನು ಆಸ್ಟ್ರೇಲಿಯಾ ಬ್ಯಾಟರ್ಗಳು ಬೌಂಡರಿ, ಸಿಕ್ಸರ್ ಹೊಡೆದಾಗ ಬೇಸರ ಹೊರ ಹಾಕುತ್ತಿರುವುದು ಸಾಮಾನ್ಯವಾಗಿತ್ತು.
ಶಾಸಕ ಅಭಯ್ ಪಾಟೀಲ್ ನಗರದ 7 ಕಡೆಗಳಲ್ಲಿ ಕ್ರಿಕೆಟ್ ಹಬ್ಬ ಕಣ್ತುಂಬಿಕೊಳ್ಳಲು ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಿದ್ದರು. ಶಾಹಪುರದ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್, ಶಿಂಧೆ ಮೈದಾನ, ಮಹಾದ್ವಾರ್ ರೋಡ್ ಮಹಾರಾಜ ಮೈದಾನ, ಭಾಗ್ಯ ನಗರದ ದತ್ತ ಮಂದಿರ, ಕೋರೆಗಲ್ಲಿಯ ಸೂರಜ್ ಕೋಲ್ಡ್ರೀಂಕ್ಸ್, ನಾಥ್ ಫೈ ಸರ್ಕಲ್, ಟಿಳಕವಾಡಿಯ ಫಸ್ಟ್ ರೈಲ್ವೆ ಗೇಟ್ ಬಳಿ ಫೈನಲ್ ಪಂದ್ಯವನ್ನು ಸಾವಿರಾರು ಜನ ವೀಕ್ಷಿಸಿದರು.
ಇದನ್ನೂ ಓದಿ:ವಿಶ್ವಕಪ್ ಫೈನಲ್: ಭಾರತದ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳಿಂದ ದೇವಾಲಯಗಳಲ್ಲಿ ಪೂಜೆ