ಸಂಕ್ರಾಂತಿ ನಿಮಿತ್ತ ಹೂವು ಹಣ್ಣುಗಳಿಂದ ಶೃಂಗಾರಗೊಂಡ ಪಂಡರಾಪುರ ದೇವಾಲಯ - ಪಂಡರಾಪುರ ದೇವಾಲಯ
Published : Jan 15, 2024, 5:02 PM IST
ಚಿಕ್ಕೋಡಿ :ದೇಶಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ಹಬ್ಬದ ಪ್ರಯುಕ್ತ ಪಂಡರಾಪುರ ವಿಠಲ್ ರುಕ್ಮಿಣಿ ದೇವಸ್ಥಾನಕ್ಕೆ ಹೂವು ಹಣ್ಣಿನಿಂದ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ. ಮಹಾರಾಷ್ಟ್ರ ಪಂಡರಾಪುರ ಪಾಂಡುರಂಗ ವಿಠಲ ದೇವಸ್ಥಾನ ಗರ್ಭಗುಡಿಯ ಆವರಣವನ್ನು ಹೂವು ಹಣ್ಣಿನಿಂದ ಶೃಂಗಾರ ಮಾಡಲಾಗಿದೆ.
ರೈತರು ಬೆಳೆದ ಬಗೆ ಬಗೆ ತರಕಾರಿಗಳಿಂದ ದೇವಸ್ಥಾನ ಅಲಂಕಾರ ಮಾಡಲಾಗಿದೆ. ಇದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಪಂಡರಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಭಕ್ತರು ತೆರಳಿ, ಪಾಂಡುರಂಗ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಒಬ್ಬರಿಗೆ ಒಬ್ಬರು ಸಿಹಿ ಹಂಚಿ, ಶುಭಾಶಯಗಳನ್ನು ಕೋರಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ದಕ್ಷಿಣ ಕಾಶಿ ಶಿವಗಂಗೆಯಲ್ಲಿ ತೀರ್ಥೋದ್ಭವ : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವಗಂಗೆಯಲ್ಲಿ ಪ್ರತಿ ವರ್ಷ ಮಕರ ಸಂಕ್ರಾತಿ ಹಬ್ಬದಂದು ತೀರ್ಥೋದ್ಭವ ನಡೆಯುತ್ತದೆ. ಅಂತೆಯೇ ಈ ಬಾರಿಯೂ 4,547 ಅಡಿ ಎತ್ತರದ ಈ ಬೆಟ್ಟದ ತುತ್ತತುದಿಯಲ್ಲಿ ಗಂಗೋತ್ಪತ್ತಿಯಾಗಿದೆ. ಪ್ರಾಕೃತಿಕ ವಿಸ್ಮಯವನ್ನು ಭಕ್ತರು ಸಾರ್ಥಕ ಭಾವದಿಂದ ಕಣ್ತುಂಬಿಕೊಂಡರು. ಶಿವಗಂಗೆ ಕ್ಷೇತ್ರದಲ್ಲಿ ಗಂಗಾಧರೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಇಂದು ಬೆಳಗ್ಗೆ 8.25 ಗಂಟೆಗೆ ಬೆಟ್ಟದ ತುದಿಯಲ್ಲಿ ತೀರ್ಥೋದ್ಭವವಾದ ತೀರ್ಥ ತಂದು ಗಿರಿಜಾ ಕಲ್ಯಾಣ ನೆರವೇರಿಸಲಾಯಿತು.
ಮಕರ ಸಂಕ್ರಾತಿಯಂದು ನಡೆಯುವ ಗಿರಿಜಾ ಕಲ್ಯಾಣ ಮಹೋತ್ಸವವನ್ನು ನೋಡಲು ಶಿವಗಂಗಾ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಹೀಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿದೆ. ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಒಬ್ಬರು ಡಿವೈಎಸ್ಪಿ, ನಾಲ್ವರು ಆರಕ್ಷಕ ನಿರೀಕ್ಷಕರು, 8 ಮಂದಿ ಆರಕ್ಷಕ ಉಪನಿರೀಕ್ಷಕರು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ:ದಕ್ಷಿಣ ಕಾಶಿ ಶಿವಗಂಗೆಯಲ್ಲಿ ತೀರ್ಥೋದ್ಭವ: ವಿಡಿಯೋ