ತುಂಬಿ ಹರಿಯುತ್ತಿರುವ ನೀರಸಾಗರ ಜಲಾಶಯ.. ಸೆಲ್ಫಿ ಕ್ರೇಜ್ನಲ್ಲಿ ಮೈಮರೆತರೆ ಅಪಾಯ ಗ್ಯಾರಂಟಿ
ಹುಬ್ಬಳ್ಳಿ: ಅವಳಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯಕ್ಕೆ ಜೀವಕಳೆ ಬಂದಿದೆ. ನೀರಸಾಗರ ತುಂಬಿ ಹರಿಯುತ್ತಿರುವುದರಿಂದ ಇದರ ಸೌಂದರ್ಯ ಹೆಚ್ಚಾಗಿದೆ. ಹಾಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಆಗಮಿಸುತ್ತಿದೆ.
ಜಲಾಶಯದ ಮೇಲೆ ನೀರು ಹರಿಯುತ್ತಿದ್ದರೂ ಕೆಲ ಯುವಕರು ಹುಚ್ಚಾಟ ಮೆರೆಯುತ್ತಿದ್ದಾರೆ. ಜಲಾಶಯ ಕೋಡಿ ಮೇಲೆ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನೀರಿನ ಮಧ್ಯೆ ನಡುಗಡ್ಡೆಯಂತಿರುವ ಪ್ರದೇಶದಲ್ಲಿ ನಿಂತು ಕೆಲವರು ಹುಚ್ಚಾಟ ನಡೆಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಕಳೆದ ವರ್ಷವೂ ಇದೇ ಜಲಪಾತದ ಬಳಿ ಯುವಕನೊಬ್ಬ ಕೊಚ್ಚಿಹೋಗಿದ್ದ. ಆದರೂ ಎಚ್ಚೆತ್ತುಕೊಳ್ಳದ ಜನತೆ, 1.02 ಟಿಎಂಸಿ ಸಾಮರ್ಥ್ಯದ ನೀರಸಾಗರದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಇನ್ನು, 1955 ರಿಂದಲೂ ಹುಬ್ಬಳ್ಳಿ ನಗರಕ್ಕೆ ನೀರು ಪೂರೈಸುತ್ತಿರುವ ನೀರಸಾಗರ, ಈಗಲೂ ಹುಬ್ಬಳ್ಳಿಗೆ ಶೇ. 25 ರಷ್ಟು ಭಾಗಕ್ಕೆ ಕುಡಿಯುವ ನೀರಿನ ಮೂಲವಾಗಿದೆ. ಕೆಲವರ ದುಸ್ಸಾಹಸದಿಂದ ನೀರ ಸಾಗರದ ಬಳಿ ಆತಂಕ ನಿರ್ಮಾಣವಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮಳೆಯಿಂದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ.. ವೀಕ್ಷಣೆಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು