ಪ್ರಯಾಣಿಕರಿಂದ ತುಂಬಿ ತುಳುಕಿದ ಬಸ್; ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದ ಅಜ್ಜಿ
ಚಿಕ್ಕೋಡಿ : ಸರ್ಕಾರ ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಫ್ರೀ ಬಸ್ ಸಂಚಾರವನ್ನು ಒದಗಿಸಿದೆ. ಇದರ ಪರಿಣಾಮವಾಗಿ ಕೆಲವು ಬಸ್ಗಳಲ್ಲಿ ಜನಜಂಗುಳಿ ನಡುವೆ ಸಂಚಾರ ಮಾಡುವಂತಾಗಿದೆ. ಬಸ್ಸಿನ ಬಾಗಿಲಲ್ಲಿ ನಿಂತಿದ್ದ ವಯೋವೃದ್ದೆವೋರ್ವರು ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದಾರೆ. ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣದಿಂದ ಕೆರೂರು ಮಾರ್ಗವಾಗಿ ಕಾಡಾಪೂರ ಕಡೆಗೆ ಹೊರಟಿದ್ದ ಬಸ್‌ನಲ್ಲಿ ಈ ಅಚಾತುರ್ಯ ನಡೆದಿದೆ. ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಅಜ್ಜಿಯೊಬ್ಬರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬಾಗಿಲಿನಲ್ಲಿ ನಿಂತಿದ್ದ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪವಾಡ ಸದೃಶ್ಯ ರೀತಿಯಲ್ಲಿ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಕಲ್ಪಿಸುವುದು ಸ್ವಾಗತಾರ್ಹ. ಆದರೆ ಸರ್ಕಾರ ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಬಸ್ ಸಂಚಾರ ಒದಗಿಸಬೇಕು. ಉಚಿತ ಬಸ್ ಸೇವೆ ಘೋಷಣೆಯಾಗುತ್ತಿದ್ದಂತೆ ಕೆಲವರು ತಮ್ಮ ವಾಹನಗಳನ್ನು ಮನೆಯಲ್ಲಿ ಇಟ್ಟು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಹೆಚ್ಚಿಗೆ ಜನದಟ್ಟಣೆ ಆಗುತ್ತಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಹೆಚ್ಚಿನ ಬಸ್ ಅನ್ನು ಒದಗಿಸಬೇಕು ಮತ್ತು ಬಸ್‌ನಲ್ಲಿ 52 ಸೀಟ್ಗಳ ಲಭ್ಯವಿದೆ. ಆದರೆ 100 ರಿಂದ 110 ಜನರು ಬಸ್ ಸಂಚಾರ ನಡೆಸುತ್ತಿದ್ದಾರೆ.
ಇದರಿಂದ ಸ್ಪಷ್ಟವಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಸಾರಿಗೆ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಈ ಅವಘಡದಲ್ಲಿ ಅಜ್ಜಿಗೆ ಏನಾದರೂ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆಗಾರರು. ಇದರಿಂದ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿನ ಬಸ್ಗಳನ್ನು ಬಿಡುಗಡೆ ಮಾಡಬೇಕೆಂದು ಸ್ಥಳೀಯರಾದ ಮಂಜುನಾಥ ಪರಗೌಂಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬ್ರೇಕ್ ಬದಲು ಕ್ಲಚ್ ಅದುಮಿದ ಚಾಲಕ: ಕಾಲೇಜು ಕಾಂಪೌಂಡ್ ಒಡೆದು ನುಗ್ಗಿದ ಕಾರು- ವಿಡಿಯೋ