ಮೇಕೆದಾಟು ಯೋಜನೆಯ ಪ್ರಗತಿ ಪರಿಶೀಲನಾ ಸಭೆಗೆ ಕರೆದಿಲ್ಲ: ಶಾಸಕ ಎಂ.ಆರ್.ಮಂಜುನಾಥ್
Published : Oct 22, 2023, 5:40 PM IST
ಚಾಮರಾಜನಗರ: "ಮೇಕೆದಾಟು ಯೋಜನೆಗಾಗಿ ಡಿ.ಕೆ.ಶಿವಕುಮಾರ್ ಅವರು ಹಿಂದೆ ಪಾದಯಾತ್ರೆ ಮಾಡಿದ್ದರು. ಈಗ ಅವರದ್ದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕಾಮಗಾರಿ ಚುರುಕು ಪಡೆಯುತ್ತಿಲ್ಲ" ಎಂದು ಹನೂರು ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಮೇಕೆದಾಟು ಯೋಜನೆ ಸಂಬಂಧ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾಮಗಾರಿ ವ್ಯಾಪ್ತಿಯ ಮರ ಎಣಿಕೆ ನಡೆಸಿ ವರದಿ ಸಲ್ಲಿಸುವಂತೆ 29 ಉಪವಲಯ ಅರಣ್ಯಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿತ್ತು. ಆದರೆ ಮರ ಎಣಿಕೆ ಯಾಕೆ ಆಗ್ತಿಲ್ಲ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಬೇಕು" ಎಂದರು.
"ಮೇಕೆದಾಟು ಯೋಜನೆ ವ್ಯಾಪ್ತಿಗೆ ಹನೂರು ತಾಲೂಕಿನ ಪ್ರದೇಶ ಬಳಕೆಯಾಗುತ್ತೆ. ಆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯುವುದಿಲ್ಲ. ಹೀಗಾಗಿ ಅದನ್ನು ಯೋಜನೆಗೆ ಬಳಸಿಕೊಳ್ಳಬಹುದು. ಈ ಸಂಬಂಧ ಪ್ರಗತಿ ಪರಿಶೀಲನೆಯ ಯಾವ ಸಭೆಗೂ ನನ್ನನ್ನು ಕರೆದಿಲ್ಲ, ನಮ್ಮ ಸಲಹೆ ಕೇಳಿಲ್ಲ, ಮಾಹಿತಿ ಇಲ್ಲದೆ ಈ ಕುರಿತು ಹೇಗೆ ಮಾತಾಡಲಿ?. ಅವರನ್ನೇ ಕೇಳಿ" ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಡಿ.ಕೆ.ಶಿವಕುಮಾರ್ ಮಾತನಾಡಿ, "ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಆಕ್ಷೇಪಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೌಖಿಕವಾಗಿ ಮೇಕೆದಾಟಿಗೆ ಏಕೆ ಅಡ್ಡ ಬರುತ್ತೀರಿ. ಕರ್ನಾಟಕ ಅವರ ಭೂಮಿಯಲ್ಲಿ ಯೋಜನೆ ಮಾಡುತ್ತಿದೆ ಎಂದು ತಮಿಳುನಾಡಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆಯುವುದು ಸೇರಿದಂತೆ ಬೇಕಿರುವ ಇತರೆ ಕ್ರಮಗಳನ್ನು ಕೈಗೊಳ್ಳಲಿದ್ದೇವೆ" ಎಂದು ತಿಳಿಸಿದ್ದರು.
ಇದನ್ನೂ ಓದಿ:ಚಾಮರಾಜನಗರ: ಸಾಮಾಜಿಕ ಬಹಿಷ್ಕಾರಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ