ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ಅಶ್ವತ್ಥ ನಾರಾಯಣ
ಸುಬ್ರಹ್ಮಣ್ಯ:ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಕುಟುಂಬ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಇಷ್ಟು ವರ್ಷ ನಮಗೆ ಚುನಾವಣೆಯಲ್ಲಿ ಬಹುಮತ ಲಭಿಸಿರಲಿಲ್ಲ. ಈ ಸಲ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಖಾಸಗಿ ಹೆಲಿಕಾಪ್ಟರ್ ಮೂಲಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಶಾಲಾ ಮೈದಾನದಲ್ಲಿ ಬಂದಿಳಿದ ಸಚಿವರು ಬಳಿಕ ಕಾರಿನ ಮೂಲಕ ಕುಕ್ಕೆಗೆ ಆಗಮಿಸಿದರು. ದೇಗುಲಕ್ಕೆ ಆಗಮಿಸಿದ ಸಚಿವರು ಹಾಗೂ ಕುಟುಂಬಸ್ಥರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ನಂತರ ದೇಗುಲದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.
ಮಠದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ:ಶ್ರೀಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅಶ್ವತ್ಥ ನಾರಾಯಣ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಎಇಒ ಪುಷ್ಪಲತಾ ಸೇರಿದಂತೆ ದೇಗುಲದ ಪ್ರಮುಖರು ಸಚಿವರನ್ನು ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್ ಕುಮಾರ್, ಪುತ್ತೂರು ಡಿವೈಎಸ್ಪಿ ವೀರಯ್ಯ ಹೀರೇಮಠ್, ಸೇರಿದಂತೆ ಕಡಬ ಮತ್ತು ಸುಬ್ರಹ್ಮಣ್ಯ ಪೋಲಿಸರು ಸಚಿವರ ಭದ್ರತೆಗೆ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ:₹245 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಐವರು ಇರಾನ್ ಪ್ರಜೆಗಳ ಬಂಧನ