ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್ನಲ್ಲೇ ಉಳಿದಿದ್ದ 52 ಸಾವಿರ ರೂ. ದೋಚಿದ ವ್ಯಕ್ತಿ : ಸಿಸಿಟಿವಿ ವಿಡಿಯೋ
ದಾವಣಗೆರೆ: ಗ್ರಾಹಕರೊಬ್ಬರು 52 ಸಾವಿರ ಹಣ ಎಟಿಎಂ ಡಿಪಾಸಿಟ್ ಮಿಷನ್ಗೆ ಹಾಕಿ, ಮಾಹಿತಿ ಭರ್ತಿ ಮಾಡಿ, ಬಟನ್ ಒತ್ತುವುದನ್ನು ಮರೆತು ಹೋಗಿದ್ದರು. ಅದೇ ವೇಳೆಗೆ ಹಣ ಡ್ರಾ ಮಾಡಲು ಬಂದ ವ್ಯಕ್ತಿಯೊಬ್ಬರಿಗೆ ಹಣ ಇರೋದು ಗೊತ್ತಾಗಿ, ತಕ್ಷಣ ಆತ 52 ಸಾವಿರ ದೋಚಿ ಪರಾರಿಯಾಗಿರುವ ಘಟನೆ ದಾವಣಗೆರೆ ಪಿ.ಬಿ. ರಸ್ತೆಯ ರಿಲಯನ್ಸ್ ಮಾರ್ಟ್ ಎದುರಿನ ಐಸಿಐಸಿಐ ಬ್ಯಾಂಕ್ ನಲ್ಲಿ ಜರುಗಿದೆ. ಹದಿನೈದು ದಿನಗಳ ಹಿಂದೆ ನಡೆದಿರುವ ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು, ಐಸಿಐಸಿಐ ಬ್ಯಾಂಕ್ನಿಂದ ಡಿಪಾಜಿಟ್ ಹಣವನ್ನು ದೋಚಿಕೊಂಡು ಹೋದ ವ್ಯಕ್ತಿಗಾಗಿ ಹುಡುಕಾಡುತ್ತಿದ್ದಾರೆ.
ಹಣ ಡಿಪಾಸಿಟ್ ಮಾಡುವಾಗ ಎಚ್ಚರ..ವಿಜಯ್ ಎಂಬ ಹೆಸರಿನ ವ್ಯಕ್ತಿ, 52 ಸಾವಿರ ರೂ. ಡಿಪಾಸಿಟ್ ಮಾಡಲು ಐಸಿಐಸಿಐ ಬ್ಯಾಂಕ್ ಗೆ ಬಂದಿದ್ದರು, ಡಿಪಾಸಿಟ್ ಮಿಷನ್ ಮೂಲಕ ಹಣ ಹಾಕಲು ವಿಜಯ್ ,ರಾಘವೇಂದ್ರ ಎಂಬುವರಿಗೆ ಹೇಳಿದ್ದರು. ರಾಘವೇಂದ್ರ, ವಿಜಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಾಗಿದ್ದು, ಅಂಗಡಿ ಸಿಬ್ಬಂದಿ ರಾಂಘವೇಂದ್ರ 52 ಸಾವಿರ ಹಣ ಡಿಪಾಸಿಟ್ ಮಾಡಿದ್ದರು. ದುರಂತ ಎಂದರೆ ಡಿಪಾಸಿಟ್ ಮಿಷನ್ ನಲ್ಲಿ ಹಣ ಹಾಕಿ ಮಾಹಿತಿ ಭರ್ತಿ ಮಾಡಿ ಡಿಪಾಸಿಟ್ ಬಟನ್ ಒತ್ತೋದನ್ನ ರಾಘವೇಂದ್ರ ಮರೆತಿದ್ದರು.
ಡಿಪಾಸಿಟ್ ಬಟನ್ ಒತ್ತದ ಕಾರಣ ಖಾತೆಗೆ ಜಮೆಯಾಗದೇ 52 ಸಾವಿರ ರೂಪಾಯಿ ಹಣ ಮಿಷನ್ ನಲ್ಲೇ ಉಳಿದಿತ್ತು. ಹಣ ಡಿಪಾಸಿಟ್ ಆಗಿದೆ ಎಂದು ವಿಜಯ್, ರಾಘವೇಂದ್ರ ಡಿಪಾಸಿಟ್ ಮಿಷನ್ ಕೋಣೆಯಿಂದ ಹೊರಗೆ ಬಂದಿದ್ದರು. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಕಣ್ಣಿಗೆ 52 ಸಾವಿರ ಕಂಡಿದ್ದು,ತಕ್ಷಣ ಆತ 52 ಸಾವಿರ ದೋಚಿ ಪರಾರಿಯಾಗಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂಓದಿ:ಐಷಾರಾಮಿ ಬದುಕಿಗೆ ಲಾರಿ ಕಳ್ಳತನ; ಆರೋಪಿ ಬಂಧಿಸಲು 278 ಸಿಸಿಟಿವಿ ಕ್ಯಾಮರಾ ಜಾಲಾಡಿದ ಪೊಲೀಸರು!