ಮಾಹು ಕಣಿವೆಯ ರೋಮಾಂಚಕ ನೋಟ ಸವಿದ ಇಂಡೋನೇಷ್ಯಾದ ಪ್ರವಾಸಿ
ರಾಂಬನ್ (ಜಮ್ಮು ಮತ್ತು ಕಾಶ್ಮೀರ) : ಅದ್ಭುತ ಭೂದೃಶ್ಯಗಳು ಮತ್ತು ಅತ್ಯುತ್ತಮ ಆತಿಥ್ಯದೊಂದಿಗೆ ತನ್ನ ತೋಳುಗಳನ್ನು ತೆರೆದು ಮಾಹು ಕಣಿವೆ ಪ್ರವಾಸಿಗರನ್ನು ಸ್ವಾಗತಿಸುತ್ತ ಬಂದಿದೆ. ಮುಖ್ಯವಾಗಿ ಈ ಕಣಿವೆ ಸಾಂಸ್ಕೃತಿಕ ವಿನಿಮಯ ಮತ್ತು ಅನ್ವೇಷಣೆಯ ಮಹತ್ವವನ್ನು ಸಾರುತ್ತದೆ. ಅದರಂತೆಯೇ ಇದೀಗ ಈ ಕಣಿವೆಯ ಸೌಂದರ್ಯವನ್ನು ಸವಿಯಲು ಇಂಡೋನೇಷ್ಯಾದ ಪ್ರವಾಸಿ ಶ್ರೀಮತಿ ಪೆಪೆಯವರು ಆಗಮಿಸಿದ್ದಾರೆ. ಅಲ್ಲದೇ ಇಲ್ಲಿನ ಸ್ಥಳದ ವೈಶಿಷ್ಠ್ಯತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಭೇಟಿಯ ಉದ್ದಕ್ಕೂ ಶ್ರೀಮತಿ ಪೆಪೆ ರಮಣೀಯ ಕಣಿವೆಗಳ ಸೌಂದರ್ಯವನ್ನು ಸವಿದಿದ್ದಾರೆ. ಹಿಮದಿಂದ ಆವೃತವಾದ ಪರ್ವತಗಳನ್ನು ವೀಕ್ಷಿಸುತ್ತ, ಮಾಹು ಕಣಿವೆಯ ರೋಮಾಂಚಕ ನೋಟಗಳನ್ನು ಸವಿಯುತ್ತ ಈ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಮತ್ತು ಸ್ಥಳೀಯರ ಆತಿಥ್ಯವು ಶ್ರೀಮತಿ ಪೆಪೆಗೆ ಉತ್ತಮ ಅನುಭೂತಿಯನ್ನು ನೀಡಿದೆ.
ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ವಹಿಸುವಲ್ಲಿ ಭಾರತೀಯ ಸೇನೆಯ ಅಮೂಲ್ಯ ಪಾತ್ರವನ್ನು ಪೆಪೆಯವರು ಗುರುತಿಸಿದ್ದಾರೆ. ಭಾರತೀಯ ಸೇನೆಯು ಇಲ್ಲಿನ ಪ್ರವಾಸಿಗರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತಿರುವುದರಿಂದ ಪ್ರವಾಸಿಗರಿಗೆ ಕಣಿವೆಯ ಅದ್ಭುತಗಳನ್ನು ಆರಾಮವಾಗಿ ಅನುಭವಿಸಲು ಅನುವು ಮಾಡಿಕೊಟ್ಟಿದೆ ಎಂದು ಬಣ್ಣಿಸಿದ್ದಾರೆ.
"ಮಾಹು ಕಣಿವೆಯು ನನ್ನ ಪಾಲಿಗೆ ಒಂದು ಕನಸಾಗಿತ್ತು, ಅದೀಗ ನನಸಾಗಿದೆ. ಸ್ಥಳೀಯರ ಸೌಹಾರ್ದತೆ, ಮಂತ್ರಮುಗ್ಧಗೊಳಿಸುವ ಭೂದೃಶ್ಯಗಳು ಈ ಭೇಟಿಯನ್ನು ಅಸಾಧಾರಣಗೊಳಿಸಿದೆ. ಈ ಸ್ವರ್ಗದ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಧೈರ್ಯಶಾಲಿ ಸೈನ್ಯದ ಸಮರ್ಪಣಾಭಾವಕ್ಕೆ ನನ್ನ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಇಂಡೋನೇಷ್ಯಾದ ಪ್ರವಾಸಿ ತಿಳಿಸಿದ್ದಾರೆ.
ಇದನ್ನೂ ಓದಿ:Watch... ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ.. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ