ರೈಲು ಬರುತ್ತಿರುವುದನ್ನು ಕಂಡು ಗಾಬರಿಯಿಂದ ನದಿಗೆ ಹಾರಿದ ಕಾರ್ಮಿಕ : ವಿಡಿಯೋ ವೈರಲ್ - ಪ್ಯಾಸೆಂಜರ್ ರೈಲು
ಬಿಹಾರ :ಸಹರ್ಸಾ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಕಾರ್ಮಿಕರೊಬ್ಬರು ಬಾಗಮತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ನಡೆದಿದೆ. ಖಾಸಗಿ ರೈಲು ಗುತ್ತಿಗೆದಾರರೊಬ್ಬರ ಸಲಹೆಯಂತೆ ಬಾಗಮತಿ ಸೇತುವೆ ಮೇಲೆ ವ್ಯಕ್ತಿ ಕೆಲಸ ಮಾಡುತ್ತಿದ್ದರು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಸೇತುವೆಯ ಮೇಲೆ ಪ್ಯಾಸೆಂಜರ್ ರೈಲು ಬಂದಿದೆ. ಎದುರಿನಿಂದ ಬರುತ್ತಿದ್ದ ರೈಲು ನೋಡಿದ ಕಾರ್ಮಿಕ, ತನ್ನ ಜೀವ ಉಳಿಸಿಕೊಳ್ಳಲು ಬಾಗಮತಿ ನದಿಗೆ ಹಾರಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹಗ್ಗದ ಸಹಾಯದಿಂದ ಹೊರ ಬಂದ ಕಾರ್ಮಿಕ : ಕಾರ್ಮಿಕ ನದಿಗೆ ಹಾರಿದ ನಂತರ ಸ್ಥಳೀಯರು ಹಗ್ಗವನ್ನು ನದಿಗೆ ಎಸೆದು ಆತನ ಜೀವ ಉಳಿಸಿದ್ದಾರೆ. ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ, ಕಾರ್ಮಿಕನ ಹೆಸರು ಅಶೋಕ್ ಕುಮಾರ್ ಎಂದು ಹೇಳಲಾಗುತ್ತಿದೆ. ಅವರು ಎಲ್ಲಿಂದ ಬಂದವರು? ಮತ್ತು ಯಾವ ಗುತ್ತಿಗೆದಾರರ ಅಡಿ ಕೆಲಸ ಮಾಡುತ್ತಿದ್ದಾರೆ? ಎಂಬುದರ ಕುರಿತು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಇನ್ಸ್ಪೆಕ್ಟರ್ ವಂದನಾ ಕುಮಾರಿ ಹೇಳಿದ್ದೇನು? : ಮತ್ತೊಂದೆಡೆ, ಘಟನೆಯ ಬಗ್ಗೆ ಆರ್‌ಪಿಎಫ್ ಇನ್ಸ್ಪೆಕ್ಟರ್ ವಂದನಾ ಕುಮಾರಿ ಮಾಹಿತಿ ನೀಡಿದ್ದು, ವ್ಯಕ್ತಿಯೊಬ್ಬರು ಬಾಗಮತಿ ನದಿಗೆ ಹಾರಿರುವ ಮಾಹಿತಿ ಬಂದಿದೆ. ಘಟನೆಯಿಂದ ವ್ಯಕ್ತಿಯ ಕಾಲು ಮುರಿದಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಬಂದ ತಕ್ಷಣ ತಿಳಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ :ಮಂಗಳೂರು : ಸಂಚರಿಸುತ್ತಿದ್ದ ರೈಲಿಗೆ ಹತ್ತಲು ಹೋದ ವೃದ್ಧನನ್ನು ರಕ್ಷಿಸಿದ ರೈಲ್ವೇ ಸಿಬ್ಬಂದಿ