ಹಾವೇರಿ: ಗುಡುಗು ಸಹಿತ ಭಾರಿ ಮಳೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು-ವಿಡಿಯೋ - ಮನೆಗಳಿಗೆ ನುಗ್ಗಿದ ಮಳೆ ನೀರು
Published : Nov 10, 2023, 11:05 AM IST
ಹಾವೇರಿ: ಗುರುವಾರ ಸಂಜೆ ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗುಸಹಿತ ಜೋರು ಮಳೆ ಸುರಿಯಿತು. ಪರಿಣಾಮ, ನಗರದಲ್ಲಿ ಜನಜೀವನ ಕೆಲಕಾಲ ಅಸ್ತವ್ಯಸ್ತವಾಯಿತು. ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರ ಸ್ವರೂಪ ಪಡೆಯಿತು. ಚರಂಡಿಗಳು ತುಂಬಿ ಹರಿದವು. ಎಂ.ಜಿ.ರಸ್ತೆ ಹಳ್ಳದಂತೆ ಕಂಡುಬಂತು.
ಹಲವು ಬೈಕ್‌ಗಳು ನೀರಿನಲ್ಲಿ ಮುಳುಗುತ್ತಿದ್ದವು. ಶಿವಾಜಿನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತು. ಮನೆಯಲ್ಲಿನ ಕಿರಾಣಿ ಸಾಮಗ್ರಿ, ತರಕಾರಿಗಳು ಇನ್ನಿತರ ವಸ್ತುಗಳೂ ಸೇರಿದಂತೆ ವಿವಿಧ ಸರಕುಗಳು ಮಳೆನೀರಿನಿಂದಾಗಿ ಹಾನಿಗೊಂಡವು. ಜನರು ತಮ್ಮ ಮನೆಗಳಲ್ಲಿ ನುಗ್ಗಿದ ಮಳೆ ನೀರು ಹೊರಹಾಕಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.
ಪ್ರತಿಸಾರಿ ಮಳೆಯಾದಾಗಲೂ ನಮ್ಮ ಮನೆಗಳಿಗೆ ಮಳೆ ನೀರು ನುಗ್ಗುತ್ತದೆ. ಇದಕ್ಕೆ ಅವೈಜ್ಞಾನಿಕ ರಾಜಕಾಲುವೆ ನಿರ್ಮಾಣ ಮತ್ತು ಒತ್ತುವರಿ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದರು. ನಗರಸಭೆ ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ವೈಜ್ಞಾನಿಕ ರಾಜ ಕಾಲುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಮಂಡ್ಯ: ಧಾರಾಕಾರ ಮಳೆಗೆ ವಿಸಿ ನಾಲೆಯ ಸುರಂಗದ ಮೇಲ್ಭಾಗದ ಭೂಮಿ ಕುಸಿತ