ಮೈಸೂರು: ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಸೆರೆ- ವಿಡಿಯೋ
Published : Aug 25, 2023, 7:09 PM IST
ಮೈಸೂರು: ಕೆ.ಆರ್.ನಗರ ತಾಲೂಕಿನ ದೊಡ್ಡವಡ್ಡರಗುಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಕೆಲವು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಬಿದ್ದಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ಮತ್ತು ಉಪವಲಯ ಅರಣ್ಯಾಧಿಕಾರಿ ಕುಮಾರ್ ತಂಡ ನಿನ್ನೆ (ಶುಕ್ರವಾರ) ರಾತ್ರಿಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಚಿರತೆ ಕಬ್ಬಿನ ಗದ್ದೆಯಲ್ಲಿ ಬಿಟ್ಟು ಹೋಗಿದ್ದ ಎರಡು ಮರಿಗಳನ್ನು ಮತ್ತು ಕಾಲರ್ ಕ್ಯಾಮರಾವನ್ನು ಸ್ಥಳದಲ್ಲಿಟ್ಟು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿತ್ತು. ಕಾವಲ್ ಹೊಸೂರು, ಬಟಿಗನಹಳ್ಳಿ, ಭೇರ್ಯ, ಗೇರದಡ, ಮುಂಜನಹಳ್ಳಿ, ಹರಂಬಳ್ಳಿ ಹೊಸ ಅಗ್ರಹಾರ, ದೊಡ್ಡವಡ್ಡರಗುಡಿ ಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಚಿರತೆ ಮೇಕೆ, ಕುರಿ, ಹಸುಗಳನ್ನು ಕೊಂದು ಹಾಕಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.
ಕೆಲವು ದಿನಗಳ ಹಿಂದೆ ದೊಡ್ಡವಡ್ಡರಗುಡಿ ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ಚಿರತೆಯ ಎರಡು ಮರಿಗಳು ಪತ್ತೆಯಾಗಿದ್ದವು. ಚಿರತೆ ಸೆರೆಗೆ ಅರಣ್ಯ ಇಲಾಖೆಯ ಮುಖ್ಯಸ್ಥರು ಹಾಗೂ ಮೇಲಾಧಿಕಾರಿಗಳ ಜೊತೆ ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ತಂಡ ಚರ್ಚಿಸಿ ಆ ಸ್ಥಳದಲ್ಲೇ ಚಿರತೆ ಮರಿಗಳನ್ನು ಬೋನಿನಲ್ಲಿರಿಸಿ, ಚಿರತೆಯ ಚಲನವಲನಗಳ ನಿಗಾವಹಿಸಲು ಕಾಲರ್ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಕಳೆದ ರಾತ್ರಿ ಚಿರತೆ ತನ್ನ ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ಕೆ.ಆರ್.ನಗರದ ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ತಿಳಿಸಿದರು.
ಇದನ್ನೂ ಓದಿ:ಆಳಂದ ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷ: ಒಬ್ಬೊಬ್ಬರೇ ಓಡಾಡಲು ಹಿಂದೇಟು ಹಾಕುತ್ತಿರುವ ಗ್ರಾಮಸ್ಥರು