25 ಅಡಿ ಆಳದ ಬೋರ್‌ವೆಲ್‌ನಿಂದ ರಕ್ಷಿಸಲ್ಪಟ್ಟ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವು! - Rajgarh Operation Mahi Successful
Published : Dec 6, 2023, 8:44 AM IST
|Updated : Dec 6, 2023, 12:57 PM IST
ರಾಜ್‌ಗಢ, ಮಧ್ಯಪ್ರದೇಶ :ಮಂಗಳವಾರ ರಾಜ್‌ಗಢ್ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ ಐದು ವರ್ಷದ ಬಾಲಕಿಯನ್ನು ರಕ್ಷಿಸಿದ ನಂತರ ಭೋಪಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
25 ಅಡಿ ಆಳದ ಬೋರ್‌ವೆಲ್ ಒಳಗೆ ಬಿದ್ದಿದ್ದ ಐದು ವರ್ಷದ ಬಾಲಕಿಯನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಸುಮಾರು ಒಂಬತ್ತು ಗಂಟೆಗಳ ಕಾರ್ಯಾಚರಣೆ ನಂತರ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಮಗುವನ್ನು ಬೋರ್‌ವೆಲ್‌ನಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಬಳಿಕ ಬಾಲಕಿಯನ್ನು ಪಚೋರ್‌ನಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 70 ಕಿಮೀ ದೂರದಲ್ಲಿರುವ ಭೋಪಾಲ್‌ನ ಸರ್ಕಾರಿ ಹಮೀಡಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 6 ಗಂಟೆಯ ಸುಮಾರಿಗೆ ಬಾಲಕಿ ಸಾವನ್ನಪ್ಪಿರುವುದಾಗಿ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಕಿರಣ್ ವಾಡಿಯಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕಿಯ ಶವವನ್ನು ಮಗುವಿನ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ನರಸಿಂಗಗಢ ವ್ಯಾಪ್ತಿಯ ಪಿಪಾಳ್ಯ ರಸೋಡ ಗ್ರಾಮದಲ್ಲಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಅಜ್ಜನೊಂದಿಗೆ ಜಮೀನಿಗೆ ತೆರಳಿದ್ದ 5 ವರ್ಷದ ಮಹಿ, ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಸುಮಾರು 25 ರಿಂದ 30 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಘಟನೆಯ ಸುದ್ದಿ ಸ್ವೀಕರಿಸಿದ ರಾಜ್‌ಗಢ ಜಿಲ್ಲಾಧಿಕಾರಿ ಹರ್ಷ್ ದೀಕ್ಷಿತ್ ಮತ್ತು ಹೊಸದಾಗಿ ನೇಮಕಗೊಂಡ ಶಾಸಕ ಮೋಹನ್ ಶರ್ಮಾ ಸೇರಿದಂತೆ ಸ್ಥಳೀಯ ಆಡಳಿತದ ಅಧಿಕಾರಿಗಳು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಮಗುವನ್ನು ಮೇಲಕ್ಕೆ ಎತ್ತಿದ್ದರು. ಬೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕಿ : 2 ಗಂಟೆಗಳ ಕಾರ್ಯಾಚರಣೆ ಬಳಿಕ ಮಗು ರಕ್ಷಣೆ