ತುಂಗಭದ್ರಾ ಎಡದಂಡೆಯ ಕೊನೆ ಭಾಗದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ - ರೈತರ ಹೋರಾಟ ಸಮಿತಿ
Published : Oct 16, 2023, 10:45 PM IST
ರಾಯಚೂರು:ತುಂಗಭದ್ರಾ ಎಡದಂಡೆಯ ಕೊನೆ ಭಾಗದ ಕಾಲುವೆಗೆ ನೀರು ಪೂರೈಸದೇ ಇರುವುದನ್ನು ಖಂಡಿಸಿ ರೈತರ ಹೋರಾಟ ಸಮಿತಿ ಇಂದು ಸಾತ್ಮೈಲ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಗೆ ಬರುವ 104 ಮೈಲ್ ಕಾಲುವೆಗೆ ತುಂಗಭದ್ರಾ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿದಂತೆ ನೀರು ಬಿಡಬೇಕು. ಆದರೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಇದರಿಂದ ರೈತರ ಬೆಳೆ ನಷ್ಟವಾಗಿ ಸಂಕಷ್ಟದ ಸ್ಥಿತಿ ಅನುಭವಿಸುವಂತೆ ಆಗಿದೆ.
104 ಮೈಲ್ ಕಾಲುವೆ ವ್ಯಾಪ್ತಿಗೆ ಸುಮಾರು 55 ಸಾವಿರ ಎಕರೆ ಜಮೀನು ಬರುತ್ತದೆ. ಹಾಗಾಗಿ ಈ ಪ್ರದೇಶದ ಜನರು ಈ ಕಾಲುವೆ ನೀರು ಅವಲಂಬಿಸಿದ್ದಾರೆ. ಸರಿಯಾದ ಪ್ರಮಾಣದಲ್ಲಿ ನೀರು ಬಿಡದೇ ಇರುವುದರಿಂದ ರೈತರ ಬದುಕು ದುಸ್ತರವಾಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಿಗದಿತ ಪ್ರಮಾಣದಲ್ಲಿ ನೀರು ಹರಿಸುವ ಕಾರ್ಯ ಮಾಡಬೇಕಾಗಿದ್ದ ಜಿಲ್ಲಾಡಳಿತ ಸಹ ರೈತರಿಗೆ ನೀರು ಒದಗಿಸುವಲ್ಲಿ ವಿಫಲವಾಗಿದೆ. ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳು 104 ಮೈಲು ಕಾಲುವೆಗೆ ನೀರು ಹರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಾತ್ಮೈಲ್ ಕ್ರಾಸ್ ರಾಯಚೂರು-ಲಿಂಗಸುಗೂರು, ರಾಯಚೂರು-ಸಿಂಧನೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಪ್ರತಿಭಟನೆಯಿಂದ ಸಂಚಾರಕ್ಕೆ ಅಡಚಣೆಯುಂಟಾಗಿ ವಾಹನ ಸವಾರರು, ಬಸ್‌ನಲ್ಲಿ ಸಂಚಾರಿಸುವ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಇದನ್ನೂ ಓದಿ:ಮಂಡ್ಯ: ಕಾವೇರಿಗಾಗಿ ಸಮಾಧಿ ಮಾಡಿಕೊಂಡು ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ