ಡಾ.ಅಂಬೇಡ್ಕರ್ ನಿಂದನೆ ಆರೋಪ: ಸಿಮ್ಸ್ ಡೀನ್ ಮುಖಕ್ಕೆ ಮಸಿ, ಕಾರು ಜಖಂಗೊಳಿಸಿ ಪ್ರತಿಭಟನೆ
ಚಾಮರಾಜನಗರ : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್ ಕುಮಾರ್ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರ ಹಾಕಿರುವ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ. ಸಿಮ್ಸ್ ಡೀನ್ ಡಾ. ಸಂಜೀವ್ ಕುಮಾರ್ ರೆಡ್ಡಿ ಅವರನ್ನು ಮುತ್ತಿಗೆ ಹಾಕಿದ ಬಿಎಸ್ಪಿ ಹಾಗೂ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಂಜೀವ್ ಕುಮಾರ್ ಅವರ ಕಾರನ್ನು ಜಖಂಗೊಳಿಸಿ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.
ವಿಚಾರ ಅರಿತ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಡೀನ್ ಅವರನ್ನು ಪ್ರತಿಭಟನಾಕಾರರಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ, ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಟೈರ್ ಸುಟ್ಟು ರಸ್ತೆ ತಡೆ ನಡೆಸಿ ಡೀನ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಿಡಿಕಾರಿದರು.
ಡಿಸಿಗೆ ದೂರು: ಡಾ.ಗಿರೀಶ್ ಪಾಟೀಲ್, ಡಾ.ಹರ್ಷ ಸಮ್ಮುಖದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಡಾ.ಸಂಜೀವ್ ನಿಂದಿಸಿದ್ದಾರೆ ಎಂದು ಆರೋಪಿಸಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಾರುತಿ ಚಾಮರಾಜನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಆರೋಪ ಏನು? :ಹಲವು ತಿಂಗಳುಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ಆಗಿಲ್ಲ. ಇದನ್ನು ಕೇಳಲು, ನಿನ್ನೆ ಮೇ 18 ರಂದು (ಗುರುವಾರ) ಡೀನ್ ಕೊಠಡಿಗೆ ತೆರಳಿದ್ದ ವೇಳೆ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ :ಪತಿ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ, ಪ್ರಿಯಕರ ಬೆಂಗಳೂರಿನಲ್ಲಿ ಸೆರೆ