ಪುಣೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಾಸಗಿ ಭೇಟಿ.. ಕಾರಣ?: ವಿಡಿಯೋ
Published : Oct 26, 2023, 12:52 PM IST
|Updated : Oct 26, 2023, 2:33 PM IST
ಪುಣೆ (ಮಹಾರಾಷ್ಟ್ರ): ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಿದ್ದಾರೆ. ಪ್ರಿಯಾಂಕಾ ದಿಢೀರ್ ಭೇಟಿಯು ರಾಜಕೀಯವಾಗಿ ಗಮನ ಸೆಳೆದಿದೆ. ಆದರೆ, ರಾಜಕೀಯ ಉದ್ದೇಶಕ್ಕಾಗಿ ಪುಣೆಗೆ ಆಗಮಿಸಿಲ್ಲ. ಬದಲಿಗೆ ಇದು ಅವರ ಖಾಸಗಿ ಭೇಟಿಯಾಗಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 10:30ರ ಸುಮಾರಿಗೆ ಪುಣೆ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಂದಿಳಿದರು. ಈ ವೇಳೆ, ಅವರು ಶಿಷ್ಟಾಚಾರಗಳನ್ನು ಬಿದಿಗಿಟ್ಟರು. ಖಾಸಗಿ ವಾಹನದಲ್ಲಿ ಏರ್ಪೋರ್ಟ್ನಿಂದ ತೆರಳಿದರು. ಇದೇ ವೇಳೆ, ತಮ್ಮ ಪಕ್ಷದ ನಾಯಕಿಯ ಸ್ವಾಗತಕ್ಕೆ ಕಾಂಗ್ರೆಸ್ ನಗರಾಧ್ಯಕ್ಷ ಸೇರಿದಂತೆ ವಿವಿಧ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಅವರ ಭೇಟಿಗೂ ಹೆಚ್ಚು ಸಮಯ ನೀಡದೆ, ಶುಭಾಶಯವನ್ನೂ ಸ್ವೀಕರಿಸದೇ ಹೊರಟು ಹೋಗುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತೊಂದೆಡೆ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ಹಾಗೂ ಛತ್ತೀಸ್ಗಢ ಸೇರಿ ಪಂಚ ರಾಜ್ಯಗಳ ಚುನಾವಣೆ ಕಾವು ಜೋರಾಗಿದೆ. ಬುಧವಾರ ಪ್ರಿಯಾಂಕಾ ಗಾಂಧಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಇದಕ್ಕೂ ಮುನ್ನ ತೆಲಂಗಾಣದಲ್ಲೂ ಪಕ್ಷದ ಪರ ಪ್ರಚಾರ ಮಾಡಿದ್ದರು.