ಚಾಮರಾಜನಗರ: ಪ್ರಾಣಿ ದಾಳಿಗೆ ಮಗು ಬಲಿ; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Published : Aug 24, 2023, 5:31 PM IST
ಚಾಮರಾಜನಗರ : ಅಪರಿಚಿತ ಪ್ರಾಣಿ ದಾಳಿಗೊಳಗಾಗಿ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ನಡೆಯಿತು. ರುಕ್ಮಿಣಿ (3) ಮೃತಪಟ್ಟ ಮಗು. ಕಳೆದ 15 ದಿನಗಳ ಹಿಂದೆ ತೋಟದಲ್ಲಿ ರುಕ್ಮಿಣಿ ಆಟವಾಡುತ್ತಿದ್ದಾಗ ವನ್ಯ ಪ್ರಾಣಿ ದಾಳಿ ನಡೆಸಿದ್ದು, ತಲೆಯ ಭಾಗಕ್ಕೆ ಕಚ್ಚಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ಅಸುನೀಗಿದ್ದಾಳೆ. ಮಗುವಿನ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅಹವಾಲು ಆಲಿಸಲಿಲ್ಲ, ಆಸ್ಪತ್ರೆಗೂ ಬರಲಿಲ್ಲ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಇಂದು ಯಳಂದೂರು ವಲಯ ಅರಣ್ಯ ಕಚೇರಿ ಮುಂದೆ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಿಆರ್ಟಿ ಡಿಸಿಎಫ್ ಬರಬೇಕೆಂದು ಪಟ್ಟು ಹಿಡಿದರು.
ಸೌಜನ್ಯಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಬಾಲಕಿ ಆರೋಗ್ಯ ವಿಚಾರಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು, ಡಿಸಿಎಫ್ ವಿರುದ್ಧ ಜನರು ಧಿಕ್ಕಾರದ ಘೋಷಣೆ ಕೂಗಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ :ವಿಜಯನಗರ: ಬೈಕ್ ಸವಾರನ ಮೇಲೆ ಚಿರತೆ ದಾಳಿ, ಯುವಕನಿಗೆ ಗಾಯ