ಇಂಡೋ-ಪಾಕ್ ಗಡಿಯಲ್ಲಿ ರಿಂಗ್ ಹೊಂದಿದ್ದ 'ಬೇಟೆಗಾರ' ಹದ್ದು ಸೆರೆ
Published : Dec 28, 2023, 8:22 PM IST
ಜೈಸಲ್ಮೇರ್(ರಾಜಸ್ಥಾನ): ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಶಹಗಢ ಪ್ರದೇಶದಲ್ಲಿ ತರಬೇತಿ ಹೊಂದಿದ ಹದ್ದೊಂದನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಸೆರೆ ಹಿಡಿದಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಬೇಟೆಗಾರ ಪಕ್ಷಿ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದೆ. ಆದರೆ, ಕಾಲಿನಲ್ಲಿ ಉಂಗುರಗಳು ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಬುಧವಾರ ಸಂಜೆ ಬಿಎಸ್ಎಫ್ನ ದಕ್ಷಿಣ ವಲಯದ ದಬ್ಲಾ ಬೆಟಾಲಿಯನ್ ಸೈನಿಕರು ಹದ್ದನ್ನು ಹಿಡಿದಿದ್ದಾರೆ. ಈ ಹದ್ದು ವಲಸೆ ಸಾಕುಪ್ರಾಣಿಯಾಗಿದ್ದು, ಫಾಲ್ಕನ್ ಪ್ರಭೇದಕ್ಕೆ ಸೇರಿದೆ. ಪಾಕಿಸ್ತಾನದ ಗಡಿಯಾಚೆಯಿಂದ ಹಾರಿ ಬಂದಿರುವ ಅನುಮಾನವಿದೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಟ್ರಾನ್ಸ್‌ಮಿಟರ್ ಇತ್ಯಾದಿಗಳು ಕಂಡುಬಂದಿಲ್ಲ.
ನಿನ್ನೆ ಸಂಜೆ ಯೋಧರು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ಹಸ್ತಾಂತರಿಸಿದ ಸ್ವಲ್ಪ ಸಮಯದಲ್ಲೇ ಅಂದರೆ ರಾತ್ರಿ ವೇಳೆ ರಕ್ಷಣಾ ಕೇಂದ್ರದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಅರಣ್ಯ ಇಲಾಖೆಯ ತಂಡವು ಹದ್ದಿನ ಕಳೇಬರವನ್ನು ಸರ್ಕಾರಿ ಪಶು ಆಸ್ಪತ್ರೆಗೆ ಸಾಗಿಸಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ಬಯಲಾಗಲಿದೆ. ಮತ್ತೊಂದೆಡೆ, ಅರಬ್ ಶೇಖ್ ರಾಜಮನೆತನದ ಸದಸ್ಯರು ಪ್ರತಿ ವರ್ಷ ಬೇಟೆಯಾಡಲು ಪಾಕಿಸ್ತಾನಕ್ಕೆ ಬರುತ್ತಾರೆ. ಅವರು ಇಂಡೋ-ಪಾಕ್ ಗಡಿಯ ಬಳಿ ಅನೇಕ ಪಕ್ಷಿಗಳನ್ನು ಬೇಟೆಯಾಡುತ್ತಾರೆ. ಈ ಫಾಲ್ಕನ್ ಹದ್ದು ಸಹ ಅರಬ್ ಶೇಖ್ ಸದಸ್ಯರಿಗೆ ಸೇರಿರುವ ಸಾಧ್ಯತೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ:ಬಾರಾಮುಲ್ಲಾದಲ್ಲಿ ಎಲ್ಇಟಿ ಶಂಕಿತ ಉಗ್ರನ ಬಂಧನ, ಶಸ್ತ್ರಾಸ್ತ್ರಗಳ ವಶ