'ನಮಗೆ ತಲುಪುತ್ತಿಲ್ಲ ನೀರು': ದಾವಣಗೆರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬವಣೆ
Published : Oct 23, 2023, 3:40 PM IST
ದಾವಣಗೆರೆ:ರಾಜ್ಯದಲ್ಲಿ ಈಗಾಗಲೇ ಬರ ತಾಂಡವವಾಡುತ್ತಿದೆ. ದಾವಣಗೆರೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭದ್ರಾ ನೀರು ಹರಿಸಲು ಆನ್ ಆ್ಯಂಡ್ ಆಫ್ ಪದ್ದತಿ ಜಾರಿ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ನೂರು ದಿನಗಳ ಕಾಲ ನೀರು ಬಿಡುವುದಾಗಿ ಹೇಳಿದ್ದ ಸರ್ಕಾರದವರು ಈಗ ಆನ್ ಆ್ಯಂಡ್ ಆಫ್ ಪದ್ಧತಿ ಮಾಡುತ್ತಿದ್ದಾರೆ. ಅವರು ಹತ್ತು ದಿನ ಆನ್ ಮಾಡಿದ್ರೆ, ನಮಗೆ ಇಪ್ಪತ್ತು ದಿನ ನೀರು ಬಂದ್ ಆಗುತ್ತದೆ. ಏಕೆಂದರೆ ಎ ಮತ್ತು ಬಿ ಎಂಬ ಎರಡು ಚಾನಲ್‌ನಲ್ಲಿ ನೀರು ಬಿಡುತ್ತಾರೆ. ಇದು ನಮ್ಮನ್ನು ಮುಟ್ಟುವಷ್ಟರಲ್ಲಿ 20 ದಿನ ಆಗುತ್ತದೆ. ಭತ್ತ ಕಾಳು ಕಟ್ಟುವ ಸಮಯದಲ್ಲಿ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಈಗ ನೀರು ಸಿಗದಿದ್ದರೆ ಭತ್ತ ಜೊಳ್ಳಾಗುತ್ತೆ. ಅವರು ನೂರು ದಿನ ನೀರು ಬಿಡುತ್ತೇವೆ ಎಂದು ಹೇಳಿದ್ದರು. ನೀರು ಬಿಡಲ್ಲ ಅಂದಿದ್ರೆ ನಾವು ಬೇರೆ ಅಲಸಂದಿ, ರಾಗಿ, ಜೋಳವೋ ಬೇರೆ ಏನೋ ಮಾಡಿಕೊಳ್ಳುತ್ತಿದ್ದೆವು. ಈಗ ನಾಟಿ ಆದ ಮೇಲೆ ಅವರು ಆಟ ಆಡಲು ಪ್ರಾರಂಭಿಸಿದ್ದಾರೆ. ನೀರಿನಲ್ಲಿ ಕೂಡಾ ಆಟ ಆಡುತ್ತಿದ್ದಾರೆ. ಇದರಿಂದಾಗಿ ಬಹಳ ತೊಂದರೆಯಾಗಿದೆ. ಮಳೆ ಕೈ ಕೊಟ್ಟಿದೆ. ಅದರೊಂದಿಗೆ ಕರೆಂಟ್ ಅನ್ನು ದಿನಕ್ಕೆ ಎರಡು ಗಂಟೆ ಮಾತ್ರ ಕೊಡುತ್ತಿದ್ದಾರೆ. ಆನ್ ಆ್ಯಂಡ್ ಆಫ್ ಪದ್ದತಿ ಬಿಟ್ಟು ನಮಗೆ ನೀರು ಬಿಟ್ಟರೆ ರೈತರು ಸ್ವಲ್ಪನಾದ್ರೂ ಬದುಕಿಕೊಳ್ತಾರೆ'' ಎಂದು ರೈತ ಮುಖಂಡ ನಾಗೇಶ್ವರ್ ತಿಳಿಸಿದರು.
ಕಾಡಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಪರವಾಗಿ ಉಸ್ತುವಾರಿ ಸಚಿವರು ಕಾಳಜಿ ವಹಿಸುತ್ತಿಲ್ಲ ಎಂದು ಇದೇ ವೇಳೆ ದೂರಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಕೊಡದಿದ್ರೆ 1 ಲಕ್ಷ ಹೆಕ್ಟೇರ್ ಭತ್ತದ ಬೆಳೆ ನಾಶ: ಬೆಸ್ಕಾಂ ಎದುರು ರೈತರ ಅಳಲು