ಚಿಕ್ಕಮಗಳೂರು: ತೋಟದ ತಂತಿ ಬೇಲಿಗೆ ಸಿಲುಕಿದ ಮರಿ ಆನೆ ರಕ್ಷಿಸಿದ ಕಾಡಾನೆಗಳು - VIDEO
Published : Nov 12, 2023, 7:29 AM IST
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಮುಂದುವರೆದಿದೆ. ಅದರಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುವುದು ಸಾಮಾನ್ಯ ಎಂಬಂತಾಗಿದೆ. ತೋಟಕ್ಕೆ ನುಗ್ಗುವಾಗ ಮರಿ ಆನೆಯೊಂದು ತಂತಿ ಬೇಲಿಗೆ ಸಿಲುಕಿದ್ದು, ಈ ವೇಳೆ ಕಾಡಾನೆಗಳ ಹಿಂಡು ಮರಿ ಆನೆಯನ್ನು ರಕ್ಷಿಸಿರುವ ಘಟನೆ ನಗರದ ಹೊರವಲಯದಲ್ಲಿರುವ ಉಕ್ಕುಂದ ಎಂಬಲ್ಲಿ ನಡೆದಿದೆ.
ತಂತಿ ಬೇಲಿಗೆ ಸಿಲುಕಿದ ಮರಿ ಆನೆಯನ್ನು ರಕ್ಷಿಸಲು ಕಾಡಾನೆಗಳು ಸುಮಾರು 15 ನಿಮಿಷಗಳ ಕಾಲ ಹೋರಾಟ ಮಾಡಿವೆ. ಕೊನೆಗೂ ತಂತಿ ಬೇಲಿಯಿಂದ ಮರಿಯನ್ನು ಬಿಡಿಸಿಕೊಂಡು ಕಾಡಿಗೆ ತೆರಳಿವೆ. ಈ ವೇಳೆ ಸುಸ್ತಾದ ಕಾಡಾನೆಗಳು ತೋಟದೊಳಗೆ ಡ್ರಮ್ನಲ್ಲಿದ್ದ ನೀರು ಕುಡಿದು ಕಾಡಿಗೆ ಹೊರಟು ಹೋಗಿವೆ. ಈ ದೃಶ್ಯ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಏಳು ಕಾಡಾನೆಗಳ ಹಿಂಡು ನಿರಂತರ ದಾಳಿ ನಡೆಸುತ್ತಿದೆ. ಕಾಡಾನೆಗಳ ದಾಳಿಗೆ ಈ ಭಾಗದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಜೊತೆಗೆ ಕಾಡಾನೆ ದಾಳಿಗೆ ಕಾಫಿ, ಮೆಣಸು, ಏಲಕ್ಕಿ, ಬಾಳೆ, ಅಡಿಕೆ, ಇತರೆ ಬೆಳೆಗಳು ಹಾನಿಯಾಗಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ :ಚಿಕ್ಕಮಗಳೂರು : ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು.. ಕಾಫಿ, ಅಡಿಕೆ ಬೆಳೆ ನಾಶ