Watch.. ಬದುಕಿರುವಾಗಲೇ ಪುಣ್ಯಸ್ಮರಣೆ ಆಚರಿಸಿಕೊಂಡ ವೃದ್ಧ
ಫತೇಘರ್ ಸಾಹಿಬ್(ಪಂಜಾಬ್): ಹಿಂದೂ ಧರ್ಮದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಶ್ರಾದ್ಧದ ನಂತರವೇ ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಮರಣದ ನಂತರ ಕುಟುಂಬ ಪ್ರತಿ ವರ್ಷ ಅವರನ್ನು ನೆನಪಿಸಿಕೊಳ್ಳಲು ಪುಣ್ಯಸ್ಮರಣೆ ಆಚರಿಸುತ್ತದೆ. ಮಡಿದ ಹಿರಿಯರ ಹೆಸರಿನಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ನಿರ್ಗತಿಕರಿಗೆ ದಾನ ಮಾಡುತ್ತಾರೆ. ಇದರಿಂದ ನಮ್ಮ ಹಿರಿಯರ ಆತ್ಮ ಸಂತೋಷಗೊಳ್ಳುತ್ತದೆ ಎಂಬುವುದು ನಂಬಿಕೆ. ಆದರೆ ಪಂಜಾಬ್ನ ಮಜ್ರಿ ಸೋಧಿಯಾನ್ ಗ್ರಾಮದಲ್ಲಿ ವೃದ್ಧರೊಬ್ಬರು ಬದುಕಿರುವಾಗಲೇ ಪುಣ್ಯಸ್ಮರಣೆ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ.
ಗ್ರಾಮದ ಭಜನ್ ಸಿಂಗ್ ಎಂಬುವವರು ಜ.29ರಂದು ತಮ್ಮ ಪುಣ್ಯಸ್ಮರಣೆ ಆಚರಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಅವರು ನಿರ್ಗತಿಕರಿಗೆ ಅನ್ನದಾನ ಮತ್ತು ಕಂಬಳಿಗಳನ್ನು ದಾನ ಮಾಡಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಇವರು ಮಂಡಿ ಗೋಬಿಂದಗಢದ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಭಜನ್ ಸಿಂಗ್, "ಕಲಿಯುಗದ ಪ್ರಭಾವ ಬಹಳ ಇದೆ ಎಂದು ಸಮಾಜಕ್ಕೆ ಅರಿವು ಮೂಡಿಸುವುದು ನನ್ನ ಉದ್ದೇಶ. ನಮ್ಮ ಕೈಯಿಂದ ಮಾಡುವ ಕೆಲಸದಿಂದ ಮಾತ್ರ ನಮಗೆ ತೃಪ್ತಿ ಸಿಗುತ್ತದೆ. ನಾವು ಎಲ್ಲಿ ದಾನ ಮಾಡಬೇಕೋ ಅಲ್ಲಿ ಮಾಡಬೇಕು. ನಮ್ಮ ಜೀವನವನ್ನು ವ್ಯರ್ಥ ಮಾಡಬಾರದು. ಇದು ನನ್ನ 5ನೇ ವರ್ಷದ ಪುಣ್ಯತಿಥಿ. ಈ ಆಚರಣೆಯನ್ನು ನಾನು ಬದುಕಿರುವವರೆಗೂ ಪ್ರತಿ ವರ್ಷ ಮಾಡುತ್ತೇನೆ" ಎಂದರು.