ಬ್ರಾಹ್ಮಣ ಸಮುದಾಯದ ಒಡೆತನದಲ್ಲಿರುವ ಪತ್ರಿಕೆಗೆ ಜಾಹೀರಾತು ಆದೇಶ ಶುದ್ಧ ಸುಳ್ಳು: ಸಿಟಿ ರವಿ - ಆದೇಶವನ್ನು ಹಿಂಪಡೆಯುವಂತೆ ಮನವಿ
ದೊಡ್ಡಬಳ್ಳಾಪುರ: ಬ್ರಾಹ್ಮಣ ಸಮುದಾಯದ ಒಡೆತನದಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಶುದ್ಧ ಸುಳ್ಳು. ಯಾರೋ ಕಿಡಿಗೇಡಿಗಳು ಮಾಡಿರುವ ಆರೋಪ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ಪಷ್ಟನೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಬ್ರಾಹ್ಮಣ ಸಮುದಾಯ ಒಡೆತನದ ಪತ್ರಿಕೆಗಳಿಗೆ ಸರ್ಕಾರದಿಂದ ಜಾಹೀರಾತು ನೀಡುವ ಆದೇಶದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಾಹ್ಮಣ ಸಮುದಾಯದ ಪತ್ರಿಕಾ ಸಂಸ್ಥೆಗಳಿಗೆ 2 ಪುಟಗಳಷ್ಟು ಜಾಹೀರಾತು ನೀಡುವ ಆದೇಶ ಸುಳ್ಳು, ಆ ರೀತಿಯ ಆದೇಶವನ್ನೇನಾದರೂ ಸರ್ಕಾರ ಮಾಡಿದ್ದರೇ ನಾನೇ ಸಾರ್ವಜನಿಕರ ಸಮ್ಮುಖದಲ್ಲಿ ಕ್ಷಮೆ ಕೇಳಿ ಸರ್ಕಾರದ ಗಮನಕ್ಕೆ ತಂದು ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡುತ್ತೇನೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಜನರಲ್ಲಿ ಗೊಂದಲ ಉಂಟುಮಾಡಲು ನಮ್ಮ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದರು.
ದಲಿತ ಸಮುದಾಯಕ್ಕೆ ಸೇರಿದ ನಗರಸಭಾ ಸದಸ್ಯನ ಮೇಲೆ ಬಿಜೆಪಿ ಮುಖಂಡರ ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಗರಸಭಾ ಸದಸ್ಯನ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೌರ್ಜನ್ಯದ ರಾಜಕೀಯವನ್ನು ಬಿಜೆಪಿ ಪಕ್ಷ ಒಪ್ಪುವುದಿಲ್ಲ. ಚರ್ಚೆ ಮಾಡಲು ಅವಕಾಶವಿದೆ ದೌರ್ಜನ್ಯ ನಡೆಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಹಲ್ಲೆಯ ರಾಜಕಾರಣವನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಇದನ್ನೂ ಓದಿ: ಜೆಡಿಎಸ್ನ ಭವಾನಿ ರೇವಣ್ಣಗೆ ಟಿಕೆಟ್ ಆಫರ್ ನೀಡಿದ ಸಿ.ಟಿ. ರವಿ