ಮಣಿಪುರ ಘಟನೆಗೆ ಕಾರಣರಾದ ದುರುಳರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಿ: ಹರ್ಭಜನ್ ಸಿಂಗ್ - ಮಣಿಪುರ ಘಟನೆ
ನವದೆಹಲಿ:ಮಣಿಪುರದಲ್ಲಿ ನಡೆದ ಘಟನೆ ಅತ್ಯಂತ ದುಃಖಕರ ಎಂದು ಎಎಪಿ ಸಂಸದ, ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಪಟು ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿರುವ ವೈರಲ್ ವಿಡಿಯೋ ಪ್ರಕರಣದ ಕುರಿತು ನವದೆಹಲಿಯಲ್ಲಿ ಮಾತನಾಡಿದ ಅವರು, ಮಣಿಪುರದ ಘಟನೆ ನಮಗೆಲ್ಲರಿಗೂ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಘಟನೆಗಳು ಪದೇ ಪದೆ ನಮ್ಮ ದೇಶದಲ್ಲಿ ನಡೆಯುತ್ತಿರುವುದು ದುರಂತ. ಆದರೂ, ಸಹಿಸಿಕೊಳ್ಳುತ್ತಿದ್ದೇವೆ. ನಮ್ಮ ಸಹನೆಗೂ ಒಂದು ಮಿತಿ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂತಹ ದುರುಳರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯ ಮಾಡುತ್ತೇವೆ. ದೇಶ ತಲೆತಗ್ಗಿಸುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇವೆ. ಮಾಡುವವರಿಗೆ ನಾಚಿಕೆಯಾಗಬೇಕು. ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುವ ಹಾಗೂ ಇಂತಹ ಕೆಲಸಕ್ಕೆ ಕೈಹಾಕುವವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರ್ಭಜನ್ ಸಿಂಗ್ ಒತ್ತಾಯ ಮಾಡಿದ್ದಾರೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದ್ದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ನಾಯಕರಿಂದ ಹಿಡಿದು ಸಿನಿ ತಾರೆಯರು ಈ ಪ್ರಕರಣವನ್ನು ಖಂಡಿಸುತ್ತಿದ್ದಾರೆ. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.