ಬೆಂಗಳೂರು ಹೊರವಲಯದಲ್ಲಿ ಕಾಣಿಸಿಕೊಂಡ ಚಡ್ಡಿ ಗ್ಯಾಂಗ್.. ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಬಗ್ಗೆ ಪೊಲೀಸರಿಗೆ ದೂರು
ಬೆಂಗಳೂರು:ಈ ಹಿಂದೆ ಭಾರಿ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದೆ.ಸರ್ಜಾಪುರ ರಸ್ತೆ ಸುತ್ತಮುತ್ತ ಚಡ್ಡಿ ಗ್ಯಾಂಗ್ನ ಖದೀಮರು ಕಾಣಿಸಿಕೊಂಡಿದ್ದಾರೆ. ಮನೆ, ಅಂಗಡಿಗಳ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ವೈರಲ್ ಆಗಿದ್ದು, ಇದೀಗ ಜನರ ಆತಂಕಕ್ಕೆ ಕಾರಣವಾಗಿದೆ. ಕೈಯಲ್ಲಿ ಆಯುಧಗಳನ್ನ ಹಿಡಿದು ಬೀದಿ ಬೀದಿ ಸುತ್ತುತ್ತಿರುವ ಈ ಗ್ಯಾಂಗ್ ಕಳ್ಳತನಕ್ಕೆ ಹೊಂಚು ಹಾಕುತ್ತಿರುವುದು ಕಂಡುಬಂದಿದೆ. ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಹಾವಳಿ ನಿವಾಸಿಗಳಿಗೆ ಭೀತಿ ತಂದೊಡ್ಡಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ವಿಲ್ಲಾ, ಅಪಾರ್ಟ್ಮೆಂಟ್ಗಳ ಬಳಿ ಕಳ್ಳತನ ಯತ್ನವೂ ನಡೆದಿದೆ. ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಖದೀಮರ ತಂಡ ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಬೀದಿಗಳಲ್ಲಿ ಓಡಾಟ ನಡೆಸಿದ್ದಾರೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನಗಳು ನಡೆದಿವೆ. ಸಿಸಿಟಿವಿಗಳನ್ನ ನೋಡಿ ರಾತ್ರಿ ವೇಳೆ ಅಲರ್ಟ್ ಆದ ನಿವಾಸಿಗಳು ಈ ಬಗ್ಗೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆಯೂ ಕೆಲವು ಬಾರಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಬಗ್ಗೆ ಸರ್ಜಾಪುರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ: ಮೈಮೇಲಿದ್ದ ಚಿನ್ನ, ಫೋನ್ ಪೇಯಿಂದ ಹಣ ಎಗರಿಸಿ ಎಸ್ಕೇಪ್